Home ಟಾಪ್ ಸುದ್ದಿಗಳು ಮೋದಿ ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಯುವಜನ ವಿನಾಶೋತ್ಸವವೇ?: ಸಿದ್ದರಾಮಯ್ಯ ವ್ಯಂಗ್ಯ

ಮೋದಿ ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಯುವಜನ ವಿನಾಶೋತ್ಸವವೇ?: ಸಿದ್ದರಾಮಯ್ಯ ವ್ಯಂಗ್ಯ


ಬೆಂಗಳೂರು: ನಿರುದ್ಯೋಗ, ಸರ್ಕಾರಿ ನೇಮಕಾತಿಗಳಲ್ಲಿ ಭ್ರಷ್ಟಾಚಾರ, ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯ, ಮತ್ತು ಕೋಮುಗಲಭೆಗಳಿಗೆ ಬಲಿಯಾಗುತ್ತಿರುವ ರಾಜ್ಯದ ಯುವ ಸಮುದಾಯವನ್ನು ಅಣಕಿಸುವಂತೆ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೆಂದ್ರ ಮೋದಿಯವರಿಗೆ ಸ್ವಾಗತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದಲ್ಲಿ ಪ್ರಸ್ತುತ 25 ಲಕ್ಷಕ್ಕೂ ಮಿಕ್ಕಿ ನಿರುದ್ಯೋಗಿಗಳಿದ್ದಾರೆ, ಸರ್ಕಾರಿ ಕಚೇರಿಗಳಲ್ಲಿ 2.52 ಲಕ್ಷ ಉದ್ಯೋಗಗಳು ಖಾಲಿ ಬಿದ್ದಿವೆ. ಸರ್ಕಾರಿ ಶಾಲೆಗಳು ಮತ್ತು ಪಿಯು ಕಾಲೇಜುಗಳಲ್ಲಿ 53,700 ಹುದ್ದೆಗಳು ಭರ್ತಿಯಾಗಿಲ್ಲ. ಸಣ್ಣ ಕೈಗಾರಿಗಳು ಮುಚ್ಚಿಹೋದ ಕಾರಣ 83,190 ಪುರುಷರು ಮತ್ತು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಈ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವ ಮುಖ ಹೊತ್ತು ಯುವಜನೋತ್ಸವವನ್ನು ಉದ್ಘಾಟಿಸಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ? ಪ್ರಧಾನಿಯವರು ಉದ್ಘಾಟಿಸುತ್ತಿರುವುದು ಯುವಜನೋತ್ಸವವೇ? ಯುವಜನವಿನಾಶೋತ್ಸವವೇ? ಎಂದು ವ್ಯಂಗ್ಯವಾಡಿದ್ದಾರೆ.
ಪಿಎಸ್ ಐ ನೇಮಕಾತಿ ಹಗರಣಕ್ಕೆ 1.29 ಲಕ್ಷ ಯುವಜನರು ಬಲಿಯಾಗಿದ್ದಾರೆ. ಎಇ ಮತ್ತು ಜೆಇ ಪರೀಕ್ಷೆಗಳ ಪ್ರತಿಯೊಬ್ಬಅಭ್ಯರ್ಥಿಗಳಿಂದಲೂ ರೂ.50-80 ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಲಾಗಿದೆ. ರೈಲ್ವೆಯ ಭ್ರಷ್ಟ ಅಧಿಕಾರಿಗಳು ನೇಮಕಾತಿಯ ಸುಳ್ಳು ಭರವಸೆ ನೀಡಿ 22 ಕೋಟಿ ಲೂಟಿ ಮಾಡಿದ್ದಾರೆ. ನಿರುದ್ಯೋಗದಿಂದ ಬೇಸತ್ತು ರಾಜ್ಯದಲ್ಲಿ 1,129 ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಅವರ ಸಹದ್ಯೋಗಿಗಳು ಆಗಾಗ ಗೊಣಗಾಡುತ್ತಿರುವ ಗುಜರಾತ್ ಮಾದರಿ ಎಂದರೆ ಇದೇ ಆಗಿರಬಹುದು. ರಾಜ್ಯದಲ್ಲಿ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಯುವಶಕ್ತಿ ವಿನಾಶದ ಅಸಲಿ ಕತೆ ಬೇರೆ ರಾಜ್ಯಗಳಿಂದ ಬಂದಿರುವ ಯುವಜನರ ಗಮನಕ್ಕೆ ಬಂದರೆ ಇಡೀ ದೇಶದ ಎದುರ ಕರ್ನಾಟಕ ತಲೆ ತಗ್ಗಿಸಬೇಕಾದೀತು. ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರ ಬಹಳ ಮುಖ್ಯವಾಗಿ ಕನ್ನಡಿಗ ಯುವಜನರಿಗೆ ಮಾಡಿರುವ ದ್ರೋಹವನ್ನು ಇತಿಹಾಸ ಮರೆಯದು. ಪ್ರಾದೇಶಿಕ ಭಾಷೆಯಲ್ಲಿ ಕೇಂದ್ರ ನೇಮಕಾತಿ ಪರೀಕ್ಷೆಯನ್ನು ನಡೆಸಲು ನಿರಾಕರಿಸುವ ಮೂಲಕ ಕನ್ನಡಿಗ ಯುವಜನರನ್ನು ಹುಟ್ಟಿದ ನಾಡಿನಲ್ಲಿಯೇ ಅನಾಥರನ್ನಾಗಿ ಮಾಡಿದೆ ಎಂದು ಕಿಡಿಕಾರಿದರು.


ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆಯನ್ನು ಕೂಡಾ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಬರೆಯಬೇಕಾಗಿರುವ ಕಾರಣ ಈ ಬ್ಯಾಂಕ್ ಗಳಲ್ಲಿ ಕೇವಲ ಶೇಕಡಾ 6ರಷ್ಟು ಮಾತ್ರ ಕನ್ನಡಿಗ ಉದ್ಯೋಗಿಗಳಿದ್ದಾರೆ. ಸಂವಿಧಾನ ಎಲ್ಲ ಭಾರತೀಯ ಭಾಷೆಗಳಿಗೆ ಮಾನ್ಯತೆ ನೀಡಿದ್ದರೂ ಐಬಿಪಿಎಸ್ ಪರೀಕ್ಷೆಗಳೂ ಸೇರಿದಂತೆ ಕೇಂದ್ರ ಸ್ವಾಮ್ಯದ ಯಾವ ಸಂಸ್ಥೆಗಳಲ್ಲಿಯೂ ಕನ್ನಡದಲ್ಲಿ ಪರೀಕ್ಷೆ ಬರೆಯುವಂತಿಲ್ಲ. ಇದರಿಂದಾಗಿ ಸಾವಿರಾರು ಕನ್ನಡಿಗರು ಕನ್ನಡದ ನೆಲದಲ್ಲಿಯೇ ಉದ್ಯೋಗ ವಂಚಿತರಾಗುತ್ತಿದ್ದಾರೆ. ಕಾವೇರಿ ಮತ್ತು ಗಂಗೆಯಲ್ಲಿ ನೂರು ಬಾರಿ ಮುಳುಗಿ ಎದ್ದರೂ ನೊಂದ ಯುವ ಕನ್ನಡಿಗರ ಶಾಪದಿಂದ ಬಿಜೆಪಿ ನಾಯಕರಿಗೆ ಮುಕ್ತಿ ಸಿಗಲಾರದು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಪಠ್ಯಪುಸ್ತಕ ಮತ್ತು ಪಠ್ಯೇತರ ಚಟುವಟಿಕೆಗಳ ಕೇಸರೀಕರಣಗೊಳಿಸಲು ಆದ್ಯತೆ ನೀಡುತ್ತಿದೆಯೇ ಹೊರತು ಶೈಕ್ಷಣಿಕ ಮೂಲಸೌಕರ್ಯಗಳ ಅಭಿವೃದ್ದಿಗೆ ಗಮನ ನೀಡುತ್ತಿಲ್ಲ. ಕಳೆದ ಮೂರು ಬಜೆಟ್ ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇಕಡಾ 1.97ಕ್ಕಿಂತ ಮೇಲೆ ಏರಿಲ್ಲ.2022ರ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನು ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1965 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಯುವಜನರಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಿ ರಾಷ್ಟ್ರನಿರ್ಮಾಣಕ್ಕೆ ಯುವಶಕ್ತಿಯನ್ನು ಬಳಸಬೇಕಾಗಿದ್ದ ಸರ್ಕಾರ ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ತಮ್ಮ ರಾಜಕೀಯ ಲಾಭಕ್ಕಾಗಿ ಕೋಮುವಾದಿ ಚಟುವಟಿಕೆಗಳಿಗೆ ಕಾಲಾಳುಗಳಾಗಿ ಬಳಸಿಕೊಳ್ಳಲು ಹೊರಟಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ 163 ಯುವಕರು ಕೋಮು ಗಲಭೆಗಳಲ್ಲಿ ಮೃತರಾಗಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ 4,600 ರೂಪಾಯಿ ಮೊತ್ತದ ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸುವ ಮೂಲಕ ಅದನ್ನೆ ನಂಬಿರುವ ಈ ಸಮುದಾಯದ ವಿದ್ಯಾರ್ಥಿಗಳು ಅರ್ಧದಲ್ಲಿಯೇ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುವಂತಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರನ್ನು ವಿಶೇಷ ನೇಮಕಾತಿ ಯೋಜನೆ ಮೂಲಕ ಉದ್ಯೋಗ ನೀಡಲಾಗುವುದು ಎಂಬ ಬಿಜೆಪಿಯ ಭರವಸೆ ಹುಸಿಯಾಗಿ ಹೋಗಿದೆ.


ಒಂದರಿಂದ ಎಂಟನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪೂರ್ವ ವಿದ್ಯಾರ್ಥಿ ವೇತನ ರದ್ದುಗೊಳಿಸಲಾಗಿದೆ. ಸೈಕಲ್ ನೀಡುವ ಯೋಜನೆಗೆ ಅನುದಾನ ನಿಲ್ಲಿಸಿರುವ ಕಾರಣದಿಂದಾಗಿ ಸೈಕಲ್ ಸೌಲಭ್ಯ ಇಲ್ಲದೆ ಗ್ರಾಮೀಣ ಶಾಲೆಗಳಲ್ಲಿನ ಸುಮಾರು 5 ಲಕ್ಷ ವಿದ್ಯಾರ್ಥಿಗಳ ಹಾಜರಾತಿಯಲ್ಲಿ ಕುಸಿತ ಕಂಡಿದೆ. ಯುವಜನೋತ್ಸವ ಆಚರಿಸುತ್ತಿರುವ ಸರ್ಕಾರಕ್ಕೆ ರಾಜ್ಯದ ಅರ್ಧದಷ್ಟ ವಿದ್ಯಾರ್ಥಿಗಳಿಗೆ ಪರಿಷ್ಕೃತ ಪಠ್ಯಪುಸ್ತಕಗಳನ್ನು ನೀಡಲಾಗಿಲ್ಲ. ರಾಜ್ಯದ ಬಿಜೆಪಿ ಆಡಳಿತಕ್ಕೆ ನರೇಂದ್ರ ಮೋದಿಯವರ ಎಂಟು ವರ್ಷಗಳ ಆಡಳಿತವೇ ಸ್ಫೂರ್ತಿ ಎನ್ನುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಾಗ ಭಜನೆ ಮಾಡುತ್ತಿರುತ್ತಾರೆ. ಎರಡೂ ಆಡಳಿತವನ್ನು ಹೋಲಿಕೆ ಮಾಡಿದರೆ ಈ ಹೇಳಿಕೆ ಸತ್ಯವಾದುದೆಂದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


ನರೇಂದ್ರ ಮೋದಿಯವರು 2004ರ ಲೋಕಸಭಾ ಚುನಾವಣೆಯ ವೇಳೆ ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಎಂಟು ವರ್ಷಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವುದು ದೂರವೇ ಉಳಿಯಿತು, ಇದರ ಬದಲಿಗೆ ಹನ್ನೆರಡುವರೆ ಕೋಟಿ ಉದ್ಯೋಗಗಳನ್ನು ಕಿತ್ತುಕೊಂಡು ಅಸಹಾಯಕ ಜನರನ್ನು ಬೀದಿಗೆ ತಳ್ಳಲಾಗಿದೆ. 2022ರ ಏಪ್ರಿಲ್ ಹೊತ್ತಿಗೆ ದೇಶದ ನಿರುದ್ಯೋಗದ ಪ್ರಮಾಣ ಶೇಕಡಾ 10.79ಕ್ಕೆ ಏರಿ ದಾಖಲೆ ನಿರ್ಮಿಸಿದೆ. ಕೇವಲ ನೋಟು ಅಮಾನ್ಯೀಕರಣದ ಮೂರ್ಖ ತೀರ್ಮಾನದಿಂದಾಗಿ 50 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ 62 ಲಕ್ಷ ಹುದ್ದೆಗಳು ಖಾಲಿ ಇವೆ. ಕೇವಲ ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಇವೆ.
ನಿರುದ್ಯೋಗ ನಿವಾರಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿಯವರು ಶಿಕ್ಷಣ ಕ್ಷೇತ್ರವನ್ನೂ ಕೂಡಾ ನಿರ್ಲಕ್ಷಿಸುತ್ತಾ ಬಂದಿದ್ದಾರೆ. 2014-15ರಿಂದ 2022-23 ರ ವರೆಗಿನ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇಕಡಾ 4.07ರಿಂದ ಶೇಕಡಾ 2.64ಕ್ಕೆ ಇಳಿದಿದೆ. ವಿಶ್ವಬ್ಯಾಂಕ್ ಮಾನವಸಂಪನ್ಮೂಲ ಸೂಚ್ಯಂಕದಲ್ಲಿ ವಿಶ್ವದ 174 ದೇಶಗಳಲ್ಲಿ ಭಾರತದ ಸ್ಥಾನ 116 ಆಗಿದೆ. ಇದು ನೇಪಾಳ ಮತ್ತು ಬಾಂಗ್ಲಾ ದೇಶಕ್ಕಿಂತಲೂ ನಿಕೃಷ್ಟವಾಗಿದೆ. ಈ ರೀತಿ ನಿರುದ್ಯೋಗ. ಮತ್ತು ಶಿಕ್ಷಣ ಕ್ಷೇತ್ರದ ನಿರ್ಲಕ್ಷ್ಯದ ಮೂಲಕ ಯುವಜನರನ್ನು ವಿನಾಶದ ಅಂಚಿಗೆ ತಳ್ಳಿರುವ ಪ್ರಧಾನಿ ನರೇಂದ್ರಮೋದಿಯವರಿಗೆ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಲು ಯಾವ ನೈತಿಕತೆ ಇದೆ ಎನ್ನುವುದನ್ನು ಅವರೇ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version