Home ಕ್ರೀಡೆ ಐಪಿಎಲ್ ಬಿಡ್ಡಿಂಗ್’ನಲ್ಲಿ ಅದಾನಿ ಎಡವಿದ್ದೆಲ್ಲಿ? ಯಾವ ನಗರಕ್ಕೆ ಯಾರು ಎಷ್ಟು ಬಿಡ್ ಮಾಡಿದ್ದರು ಗೊತ್ತಾ ?

ಐಪಿಎಲ್ ಬಿಡ್ಡಿಂಗ್’ನಲ್ಲಿ ಅದಾನಿ ಎಡವಿದ್ದೆಲ್ಲಿ? ಯಾವ ನಗರಕ್ಕೆ ಯಾರು ಎಷ್ಟು ಬಿಡ್ ಮಾಡಿದ್ದರು ಗೊತ್ತಾ ?

ದುಬೈ : ಇಂಡಿಯನ್ ಪ್ರೀಮಿಯರ್ ಲೀಗ್’ನ 2022ರ ಆವೃತ್ತಿಯಲ್ಲಿ 10 ತಂಡಗಳು ಕಣಕ್ಕಿಳಿಯಲಿದ್ದು, ನೂತನ ಎರಡು ತಂಡಗಳು ಯಾವುದಾಗಿರಬಹುದೆಂಬ ಕುತೂಹಲಕ್ಕೆ ಸೋಮವಾರ ದುಬೈ’ನಲ್ಲಿ ತೆರೆಬಿದ್ದಿದೆ. ಉತ್ತರಪ್ರದೇಶದ ಲಖನೌ ಹಾಗೂ ಗುಜರಾತ್’ನ ಅಹಮದಾಬಾದ್ ನಗರಗಳು ನೂತನ ತಂಡಗಳನ್ನು ಪ್ರತಿನಿಧಿಸಲಿವೆ.


ಆರ್’ಪಿ-ಎಸ್’ಜಿ ಸಮೂಹ ಸಂಸ್ಥೆಯ ಸಂಜೀವ್ ಗೊಯೆಂಕಾ 7,090 ಕೋಟಿ ರುಪಾಯಿಗೆ ಬಿಡ್ ಮಾಡಿ ಲಖನೌ ತಂಡವನ್ನು ಖರೀದಿಸಿದ್ದಾರೆ. ಜಾಗತಿಕ ಇಕ್ವಿಟಿ ಹೂಡಿಕೆ ಸಂಸ್ಥೆ ಸಿವಿಸಿ ಕ್ಯಾಪಿಟಲ್ 5, 625 ಕೋಟಿ ರುಪಾಯಿಗೆ ಅಹಮದಾಬಾದ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ.


ಐಪಿಎಲ್’ನಲ್ಲಿ ಹೊಸ ಎರಡು ತಂಡಗಳಿಗಾಗಿ 22 ಸಂಸ್ಥೆಗಳು ಬಿಡ್’ನಲ್ಲಿ ಆಸಕ್ತಿ ತೋರಿದ್ದರೂ, ಕೊನೆಗೆ 9 ಸಂಸ್ಥೆಗಳು ಬಿಡ್’ನಲ್ಲಿ ಪಾಲ್ಗೊಂಡಿದ್ದವು. ಆದರೆ ಎರಡರಲ್ಲಿ ಒಂದು ತಂಡ ಅದಾನಿ ಗ್ರೂಪ್ ಪಾಲಾಗುವುದು ಬಹುತೇಕ ಖಚಿತ ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಬಿಡ್ ಪ್ರಕ್ರಿಯೆ ಮುಗಿದಾಗ ಅದಾನಿ ಔಟ್ ಆಗಿದ್ದು ಬಹುತೇಕರಿಗೆ ಬಿಗ್ ಶಾಕ್ ಆಗಿತ್ತು.
ಯಾವ ಕಂಪನಿಗಳು ಯಾವ ನಗರಕ್ಕೆ ಎಷ್ಟು ಬಿಡ್ ಮಾಡಿದ್ದವು ಎಂಬ ಮಾಹಿತಿಯನ್ನು ಪ್ರಮುಖ ಕ್ರಿಕೆಟ್ ವೆಬ್’ಸೈಟ್ ಇಎಎಸ್’ಪಿಎನ್ ಪ್ರಕಟಿಸಿದೆ. ಉದ್ಯಮಿ ಹರ್ಷ್ ಗೋಯೆಂಕಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬಿಡ್ಡಿಂಗ್ ನಡೆದ ವಿವರವನ್ನು ಪೋಸ್ಟ್ ಮಾಡಿದ್ದಾರೆ.


ಅದಾನಿ ಸಮೂಹ ಅಹಮದಾಬಾದ್ ಹಾಗೂ ಲಖನೌ ಫ್ರಾಂಚೈಸಿಗಳಿಗೆ ತಲಾ 5100 ಕೋಟಿ ರುಪಾಯಿ ಬಿಡ್ ಮಾಡಿತ್ತು. ಆರ್’ಪಿ-ಎಸ್’ಜಿ ಸಮೂಹ ಸಂಸ್ಥೆಯ ಸಂಜೀವ್ ಗೊಯೆಂಕಾ ಅಹಮದಾಬಾದ್ ಹಾಗೂ ಲಖನೌ ಫ್ರಾಂಚೈಸಿಗಳಿಗೆ 7,090 ಕೋಟಿ ರುಪಾಯಿಗೆ ಬಿಡ್ ಮಾಡಿ, ಅಹಮದಾಬಾದ್ ಫ್ರಾಂಚೈಸಿ ಪಡೆಯುವಲ್ಲಿ ಯಶಸ್ವಿಯಾಯಿತು.


ಸಿವಿಸಿ ಕ್ಯಾಪಿಟಲ್ ಸಂಸ್ಥೆ ಅಹಮದಾಬಾದ್ ಫ್ರಾಂಚೈಸಿ ಪಡೆಯಲು 5, 625 ಕೋಟಿ ರುಪಾಯಿ ಹಾಗೂ ಲಖನೌ’ಗೆ 5166 ಕೋಟಿ ರುಪಾಯಿ ಬಿಡ್ ಮಾಡಿತ್ತು. ವಿಶೇಷವೆಂದರೆ 7 ನಗರಗಳ ಆಯ್ಕೆಗೆ ಅವಕಾಶವಿದ್ದರೂ ಅಹಮದಾಬಾದ್ ಹಾಗೂ ಲಖನೌ ನಗರಗಳನ್ನು ಹೊರತು ಪಡಿಸಿ ಮೂರನೇ ನಗರಕ್ಕೆ ಸಲ್ಲಿಕೆಯಾಗಿದ್ದು ಕೇವಲ ಒಂದೇ ಒಂದು ಬಿಡ್ ಮಾತ್ರವಾಗಿತ್ತು. ಆರ್’ಪಿ-ಎಸ್’ಜಿ ಸಮೂಹ ಸಂಸ್ಥೆ ಇಂಧೋರ್ ನಗರಕ್ಕೆ 4,790 ಕೋಟಿ ರುಪಾಯಿ ಬಿಡ್ ಮಾಡಿತ್ತು. ಉಳಿದ ಯಾವ ಸಂಸ್ಥೆಗಳು ಕೂಡ 5 ಸಾವಿರ ಕೋಟಿ ರುಪಾಯಿಗಿಂತ ಅಧಿಕ ಬಿಡ್ ಮಾಡಲು ಮನಸ್ಸು ಮಾಡಿರಲಿಲ್ಲ.

ಹೊಸ ಎರಡು ತಂಡಗಳ ಸೇರ್ಪಡೆಯಿಂದಾಗಿ ಬಿಸಿಸಿಐ ನಿರೀಕ್ಷೆಗೂ ಮೀರಿ ಆದಾಯ ಗಳಿಸಿದೆ. ಎರಡು ತಂಡಗಳ ಮಾರಾಟದಿಂದ ಬಿಸಿಸಿಐ ಬೊಕ್ಕಸಕ್ಕೆ ಬರೋಬ್ಬರಿ 12, 715 ಕೋಟಿ ಆದಾಯ ಹರಿದು ಬಂದಿದೆ.

Join Whatsapp
Exit mobile version