ಕೊಚ್ಚಿ : ದೇಶದಲ್ಲಿ ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಹಿಳೆಯರ ಹಕ್ಕುಗಳ ರಕ್ಷಣೆ ಬಗ್ಗೆ ಒತ್ತಾಯಗಳೂ ಹೆಚ್ಚಾಗುತ್ತಿವೆ. ಈ ನಡುವೆ ಕೇರಳದಲ್ಲಿ ಮಹಿಳೆಯರ ಮತ್ತು ಮಕ್ಕಳ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ತೆರೆಯಲಾಗುತ್ತಿದೆ. ಇಂದು ಹೇಳಿಕೆ ನೀಡಿರುವ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ “ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಗಳನ್ನು ತೆರೆಯುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಹೊಸ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಶಾಸಕ ಕ್ಸೇವಿಯರ್ ಚಿಟ್ಟಿಲಪ್ಪಿಲ್ಲಿ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದ ಪ್ರಶ್ನೆಗೆ ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. “ಹೊಸ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಸರ್ಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪ್ರಸ್ತುತ ಸಂದರ್ಭವನ್ನು ಪರಿಗಣಿಸಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗಿದೆ. ಈ ವಿಶೇಷ ನ್ಯಾಯಾಲಯಗಳು ಸಿದ್ಧವಾದ ನಂತರ, ಇತಹ ನ್ಯಾಯಾಲಯಗಳ ಸ್ಥಾಪನೆಯ ವಿಷಯವನ್ನು ಸರ್ಕಾರ ಪರಿಶೀಲಿಸುತ್ತದೆ” ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಇಡೀ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಸರ್ಕಾರಗಳು ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಂಭಿರವಾಗಿ ಪರಿಗಣಿಸುತ್ತಿಲ್ಲ. ನ್ಯಾಯಕ್ಕಾಗಿ ವರ್ಷಾನುಗಟ್ಟಲೆ ಕೋರ್ಟಿಗೆ ಅಲೆದಾಡುವ ಸಂತ್ರಸ್ಥರು ಕೊನೆಗೆ ‘ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕೈಬಿಡಲಾಗಿದೆ’ ಎಂಬ ನ್ಯಾಯಾಧೀಶರ ಮಾತಿನಿಂದ ಜರ್ಜರಿತಗೊಂಡಂತಹ ಘಟನೆಗಳು ಹೆಚ್ಚುತ್ತಿವೆ. ಈ ನಿಟ್ಟಿನಲ್ಲಿ ಕೇರಳ ಸರಕಾರದ ಘೋಷಣೆ ಇಡೀ ದೇಶಕ್ಕೆ ಮಾದರಿಯಾಗಿದೆ.