Home ಕ್ರೀಡೆ ಟಿ-20 ವಿಶ್ವಕಪ್’ನಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ ಹಝರತುಲ್ಲಾ..!

ಟಿ-20 ವಿಶ್ವಕಪ್’ನಲ್ಲಿ ಅತಿ ದೊಡ್ಡ ಸಿಕ್ಸರ್ ಬಾರಿಸಿ ದಾಖಲೆ ನಿರ್ಮಿಸಿದ ಹಝರತುಲ್ಲಾ..!

ಶಾರ್ಜಾ: ಯುಎಇನಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ಎಡಗೈ ಬ್ಯಾಟರ್ ಹಝರತುಲ್ಲಾ ಜಝಾಯಿ ಅತೀ ದೊಡ್ಡ ಸಿಕ್ಸರ್ ಬಾರಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.


ಸ್ಕಾಟ್ಲೆಂಟ್ ವಿರುದ್ಧದ ಸೋಮವಾರ ನಡೆದ ಪಂದ್ಯದಲ್ಲಿ ಬ್ರಾಡ್ ವ್ಹೀಲ್ ಎಸೆದ ಇನ್ನಿಂಗ್ಸ್’ನ 5ನೇ ಓವರ್’ನ ಮೊದಲನೇ ಎಸೆತದಲ್ಲಿ 101 ಮೀಟರ್ ಸಿಕ್ಸರ್ ಸಿಡಿಸುವ ಮೂಲಕ ಪ್ರಸಕ್ತ ಟೂರ್ನಿಯಲ್ಲಿ ಇದುವರೆಗಿನ ಅತಿದೊಡ್ಡ ಸಿಕ್ಸರ್ ಎಂಬ ದಾಖಲೆಯನ್ನು ಹಝರತುಲ್ಲಾ ಜಝಾಯಿ ತನ್ನದಾಗಿಸಿಕೊಂಡಿದ್ದಾರೆ.


ಅಫ್ಘಾನಿಸ್ತಾನ ಪರ ಆರಂಭಿಕನಾಗಿ ಕಣಕ್ಕಿಳಿದ ಹಝರತುಲ್ಲಾ ಜಝಾಯಿ ಒಟ್ಟು 30 ಎಸೆತಗಳನ್ನು ಎದುರಿಸಿ 3 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ 44 ರನ್’ಗಳಿಸಿದ್ದ ವೇಳೆ ಮಾರ್ಕ್ ವಾಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.2018ರಲ್ಲಿ ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್’ನ ಪಂದ್ಯವೊಂದರಲ್ಲಿ ಅಬ್ದುಲ್ಲಾ ಮಝರಾಯ್ ಎಸೆದ ಓವರ್’ನ ಎಲ್ಲಾ 6 ಎಸೆತಗಳನ್ನು ಸಿಕ್ಸರ್’ ಬಾರಿಸಿ ವಿಶ್ವದಾಖಲೆಯ ಪಟ್ಟಿಯಲ್ಲಿ ಹಝರತುಲ್ಲಾ ಸ್ಥಾನ ಪಡೆದಿದ್ದರು. ಅಂದಿನ ಪಂದ್ಯದಲ್ಲಿ ಕಾಬುಲ್ ಝ್ವಾನನ್ ತಂಡದ ಪರ ಆಡಿದ್ದ ಹಝರತುಲ್ಲಾ, ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಗಳಿಸಿ ಮಿಂಚಿದ್ದರು.


ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ, ಸ್ಕಾಟ್ಲೆಂಟ್ ವಿರುದ್ಧ 130 ರನ್’ಗಳ ಅಂತರದ ಬೃಹತ್ ಗೆಲುವು ಸಾಧಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 190 ರನ್ ಕಲೆ ಹಾಕಿತ್ತು. ಬೃಹತ್ ಗುರಿ ಬೆನ್ನಟ್ಟಿದ್ದ ಸ್ಕಾಟ್ಲೆಂಡ್ 10.2 ಓವರ್’ಗಳಲ್ಲಿ ಕೇವಲ 60 ರನ್’ಗಳಿಸುವಷ್ಟರಲ್ಲೇ ಆಲೌಟ್ ಆಗಿತ್ತು. ಅಫ್ಘಾನಿಸ್ತಾನದ ಪರ ಮುಜೀಬುರ್ರಹ್ಮಾನ್ 5 ವಿಕೆಟ್ ಪಡೆದರೆ, ರಶೀದ್ ಖಾನ್ 4 ವಿಕೆಟ್ ಪಡೆದು ಮಿಂಚಿದರು

Join Whatsapp
Exit mobile version