Home ಕ್ರೀಡೆ ಐಪಿಎಲ್ 2022; ಕೊಹ್ಲಿ ಫಾರ್ಮ್‌ಗೆ ಮರಳಿದರೂ ಗೆಲುವಿನ ಲಯ ಕಾಣದ ಆರ್‌ಸಿಬಿ

ಐಪಿಎಲ್ 2022; ಕೊಹ್ಲಿ ಫಾರ್ಮ್‌ಗೆ ಮರಳಿದರೂ ಗೆಲುವಿನ ಲಯ ಕಾಣದ ಆರ್‌ಸಿಬಿ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌(ಐಪಿಎಲ್‌)ನ 15ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ಸತತ ಮೂರನೇ ಸೋಲು ಕಂಡಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಗುಜರಾತ್ ಟೈಟನ್ಸ್ ತಂಡವು ಆರ್‌ಸಿಬಿ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ. 

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಬೆಂಗಳೂರು ತಂಡ, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್ ಗಳಿಸಿದ ಅರ್ಧಶತಕಗಳ ನೆರವಿನಿಂದ 6 ವಿಕೆಟ್ ನಷ್ಟದಲ್ಲಿ 170 ರನ್ ಗಳಿಸಿತ್ತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಹಾರ್ದಿಕ್ ಪಾಂಡ್ಯ ಪಡೆ, ಇನ್ನೂ ಮೂರು ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿದೆ.  

ಟೈಟನ್ಸ್ ಪಾಲಿಗೆ ರಾಹುಲ್ ತೆವಾಟಿಯಾ ಮತ್ತೊಮ್ಮೆ ʻಗೇಮ್ ಚೇಂಜರ್ʼ ಪಾತ್ರ ನಿಭಾಯಿಸಿದರು. 25 ಎಸೆತಗಳನ್ನು ಎದುರಿಸಿದ ತೆವಾಟಿಯಾ, 2 ಸಿಕ್ಸರ್ ಮತ್ತು, 5 ಬೌಂಡಿರಿಗಳ ನೆರವಿನಿಂದ 43 ರನ್ ಗಳಿಸಿದರೆ, 39 ರನ್‌ಗಳಿಸಿದ ಡೇವಿಡ್ ಮಿಲ್ಲರ್ ಅಜೇಯರಾಗುಳಿದರು. 

ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಲ್ಲಿ 8ನೇ ಗೆಲುವು ದಾಖಲಿಸಿದ ಗುಜರಾತ್ ಟೈಟನ್ಸ್ ಅಂಕ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಮುಂದುವರಿದಿದೆ. ಈ ಮೂಲಕ ತಂಡವು ಪ್ಲೇ ಆಫ್ ಹಂತಕ್ಕೇರಿದೆ. ಮತ್ತೊಂದೆಡೆ 10 ಪಂದ್ಯಗಳಲ್ಲಿ 5ನೇ ಸೋಲಿಗೆ ಶರಣಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 5ನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಾದಿ ಕಠಿಣವಾಗಿದೆ.

ಸತತ ವೈಫ್ಯಲ್ಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ವಿರಾಟ್ ಕೊಹ್ಲಿ, ಆರಂಭಿಕನಾಗಿ ಮೈದಾನಕ್ಕಿಳಿದು ಅರ್ಧ ಶತಕ ಸಿಡಿಸಿ ಮಿಂಚಿದರು. 53 ಎಸೆತಗಳನ್ನು ಎದುರಿಸಿ 1 ಸಿಕ್ಸರ್ ಮತ್ತು 6 ಬೌಂಡರಿಗಳೊಂದಿಗೆ 5 ರನ್‌ಗಳಿಸಿದ ಕೊಹ್ಲಿ, ಬೌಲರ್ ಮುಹಮ್ಮದ್ ಶಮಿ ಅವರ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು.

ಕೊಹ್ಲಿ ಜತೆ ಇನ್ನಿಂಗ್ಸ್ ಆರಂಭಿಸಿದ್ದ ನಾಯಕ ಡು ಪ್ಲೆಸಿಸ್, ಖಾತೆ ತೆರೆಯುವ ಮುನ್ನವೇ ಪ್ರದೀಪ್ ಸಾಂಗ್ವಾನ್ ಬೌಲಿಂಗ್‌ನಲ್ಲಿ ಕೀಪರ್ ಕ್ಯಾಚಿತ್ತು ನಿರ್ಗಮಿಸಿದರು.  ಮೂರನೇ ಕ್ರಮಾಂಕದಲ್ಲಿ ಬಂದ ರಜತ್ ಪಾಟೀದಾರ್ ಆಕರ್ಷಕ 52 ರನ್ ಗಳಿಸಿದರೆ, ಬಿರುಸಿನ ಬ್ಯಾಟಿಂಗ್ ನಡೆಸಿದ ಮ್ಯಾಕ್ಸ್ವೆಲ್ (33) ಆರ್ಸಿಬಿ ಮೊತ್ತವನ್ನು 150ರ ಗಡಿ ದಾಟಿಸಿದರು. 

ಸವಾಲಿನ ಮೊತ್ತ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ವೃದ್ಧಿಮಾನ್ ಸಹಾ (29) ಹಾಗೂ ಶುಭಮನ್ ಗಿಲ್ (31) ಉತ್ತಮ ಆರಂಭವೊದಗಿಸಿದ್ದರು. ಇವರಿಬ್ಬರು ಮೊದಲ ವಿಕೆಟ್‌ಗೆ 51 ರನ್ ಪೇರಿಸಿದರು. ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ ಜೋಡಿ ಶಾಬಾಝ್ ಅಹಮದ್ ಹಾಗೂ ವನಿಂದು ಹಸರಂಗ, ಗುಜರಾತ್ ಓಟಕ್ಕೆ ಕಡಿವಾಣ ಹಾಕಿದರು. ಗಿಲ್ (31) ಮತ್ತು ನಾಯಕ ಹಾರ್ದಿಕ್ ಪಾಂಡ್ಯ (3) ವಿಕೆಟ್‌ಗಳನ್ನು ಶಾಬಾಝ್ ಪಡೆದರೆ ಸಹಾ (29), ಸಾಯಿ ಸುದರ್ಶನ್ (20) ವಿಕೆಟ್‌ಗಳನ್ನು ಹಸರಂಗ ಗಳಿಸಿದರು. ಪರಿಣಾಮ 95ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡ ಗುಜರಾತ್ ಸಂಕಷ್ಟಕ್ಕೊಳಗಾಯಿತು. 

ಈ ವೇಳೆ ಜೊತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೆವಾಟಿಯಾ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾದರು. ನಿರ್ಭಿತಿಯಿಂದ ಬ್ಯಾಟ್ ಬೀಸಿದ ಈ ಜೋಡಿ ಆರ್‌ಸಿಬಿ ಬೌಲರ್‌ಗಳನ್ನು ದಂಡಿಸಿದರು. ನಿಧಾನವಾಗಿ ಪಂದ್ಯದಲ್ಲಿ ಆರ್‌ಸಿಬಿ ಹಿಡಿತವನ್ನು ಕಳೆದುಕೊಂಡಿತು. ಮುರಿಯದ ಐದನೇ ವಿಕೆಟ್‌ಗೆ 79 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದ ಮಿಲ್ಲರ್ ಹಾಗೂ ತೆವಾಟಿಯಾ ಟೈಟನ್ಸ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

Join Whatsapp
Exit mobile version