Home ಕ್ರೀಡೆ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌; ಪಿ ವಿ ಸಿಂಧುಗೆ ಕಂಚಿನ ಪದಕ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌; ಪಿ ವಿ ಸಿಂಧುಗೆ ಕಂಚಿನ ಪದಕ

ಪ್ರತಿಷ್ಠಿತ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಭರವಸೆಯಾಗಿದ್ದ  ಪಿ ವಿ ಸಿಂಧು ಅವರು ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದ್ದು, ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಮೊದಲ ಸೆಟ್ ಸೋತರೂ ವಿಚಲಿತರಾಗದ ಜಪಾನ್ ಆಟಗಾರ್ತಿ ಅಕಾನೆ ಯಮಗುಚಿ, ಸತತ ಎರಡು ಸೆಟ್‌ಗಳನ್ನು ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ. ಝಿ ಯಿ ವಾಂಗ್ ಮತ್ತು ಆನ್ ಸೆಯಂಗ್ ನಡುವಿನ ಪಂದ್ಯದ ವಿಜೇತರನ್ನು, ಜಪಾನ್ ಆಟಗಾರ್ತಿ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ಅಗ್ರಶ್ರೇಯಾಂಕದ, ಅಕಾನೆ ಯಮಗುಚಿ ವಿರುದ್ಧ ಸಿಂಧು, 21-13, 19-21, 16-21 ಅಂತರದಲ್ಲಿ ಎಡವಿದರು. ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ, 26 ವರ್ಷದ ಸಿಂಧು, 2014ರ ಗಿಮ್‌ಚಿಯೋನ್‌ ಆವೃತ್ತಿಯಲ್ಲೂ ಕಂಚಿನ ಪದಕ ಗೆದ್ದುಕೊಂಡಿದ್ದರು.

ಸೆಮಿಫೈನಲ್‌ನ ಮೊದಲ ಗೇಮ್‌ನ ಆರಂಭದಲ್ಲಿ 10–5ರಿಂದ ಮುನ್ನಡೆ ಸಾಧಿಸಿದ ಬಳಿಕ ಸಿಂಧು ತಿರುಗಿ ನೋಡಲಿಲ್ಲ. ಅದೇ ಲಯದಲ್ಲಿ ಮುಂದುವರಿದು 21-13 ಅಂತರದಲ್ಲಿ ಗೇಮ್ ವಶಪಡಿಸಿಕೊಂಡರು. ಜಿದ್ದಾ ಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ದ್ವಿತೀಯ ಸೆಟ್‌ನಲ್ಲಿ ಒಂದು ಹಂತದಲ್ಲಿ 15-15 ಅಂತರದಲ್ಲಿ ಉಭಯ ಆಟಗಾರ್ತಿಯರು ಸಮಬಲ ಸಾಧಿಸಿದ್ದರು. ಆದರೆ ಸಿಂಧು ಎಸಗಿದ ಲೋಪಗಳ ಲಾಭ ಪಡೆದ ಅಕಾನೆ ಯಮಗುಚಿ ತಿರುಗೇಟು ನೀಡಿದರು. ಚುರುಕಿನ ರಿಟರ್ನ್ಸ್‌ಗಳ ಮೂಲಕ ಮಿಂಚಿದ ಅವರು 19-21 ಅಂತರದಿಂದ ಗೇಮ್ ಗೆದ್ದು ಸಮಬಲ ಸಾಧಿಸಿದರು.

ನಿರ್ಣಾಯಕ ಮತ್ತು ಮೂರನೇ ಗೇಮ್‌ನಲ್ಲಿ ಯಮಗುಚಿ ಪ್ರಬಲ ಹೊಡೆತಗಳಿಗೆ ಆರಂಭದಲ್ಲಿ ಸಿಂಧು ಬಳಿ ಉತ್ತರವಿರಲಿಲ್ಲ.  ವಿರಾಮದ ವೇಳೆಗೆ 14-9 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಜಪಾನ್ ಆಟಗಾರ್ತಿ, ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಸಿಂಧು ಮೇಲೆ ಸವಾರಿ ಮಾಡಿದರು. ಅಂತಿಮವಾಗಿ 21-16 ಅಂತರದಲ್ಲಿ ಗೇಮ್ ಹಾಗೂ ಪಂದ್ಯ ಗೆದ್ದ ಸಂಭ್ರಮಿಸಿದರು.

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೂ ಮೊದಲು ಉಭಯ ಆಟಗಾರ್ತಿಯರು 21 ಬಾರಿ ಪರಸ್ಪರ ಮುಖಾಮುಖಿಯಾಗಿದ್ದರು. ಇದರಲ್ಲಿ 13 ಬಾರಿ ಸಿಂಧು ಹಾಗೂ 8 ಬಾರಿ ಯಮಗುಚಿ ಗೆಲುವು ಸಾಧಿಸಿದ್ದರು. ಕೊನೆಯದಾಗಿ 2021ನೇ ವಲ್ಡ್ ಟೂರ್ ಟೂರ್ನಿಯಲ್ಲಿ  21-15, 15-21, 21-19 ಅಂತರದಲ್ಲಿ ಸಿಂಧು ಗೆಲುವಿನ ನಗೆ ಬೀರಿದ್ದರು.

Join Whatsapp
Exit mobile version