Home ಕರಾವಳಿ ಮಂಗಳೂರು: 15 ದಿನಗಳೊಳಗಾಗಿ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಲು ಖಡಕ್ ಸೂಚನೆ

ಮಂಗಳೂರು: 15 ದಿನಗಳೊಳಗಾಗಿ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಲು ಖಡಕ್ ಸೂಚನೆ

ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ನಿಯಮ ಅನ್ವಯ

ಮಂಗಳೂರು: ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವ ಸಂಘಟನೆಗಳು ಆಝಾನ್ ವಿರುದ್ಧ ನಡೆಸಿದ್ದ ಅಭಿಯಾನವು ಇದೀಗ ಎಲ್ಲ ಧಾರ್ಮಿಕ ಕೇಂದ್ರಗಳ ಧ್ವನಿವರ್ಧಕಗಳ ಬಳಕೆಯ ನಿರ್ಬಂಧಕ್ಕೆ ಕಾರಣವಾಗಿದೆ. ಇನ್ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.

ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು 2000 ಹಾಗೂ ಪರಿಸರ ರಕ್ಷಣೆ ಕಾಯಿದೆ 1986ರಂತೆ ಶಬ್ದ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಸಮಿತಿ ರಚಿಸಲಾಗಿದೆ.

ಇದರಂತೆ ಮುಂದಿನ 15 ದಿನಗಳ ಒಳಗಾಗಿ ಎಲ್ಲ ಧಾರ್ಮಿಕ ಕೇಂದ್ರಗಳು ಧ್ವನಿವರ್ಧಕ ಬಳಕೆಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

ಒಂದು ವೇಳೆ 15 ದಿನಗಳ ಒಳಗಾಗಿ ಅನುಮತಿ ಪಡೆಯದಿದ್ದಲ್ಲಿ ಅಂತಹ ಕೇಂದ್ರಗಳು ಸ್ವಯಂ ಪ್ರೇರಿತವಾಗಿ ಮೈಕ್ ಗಳನ್ನು ತೆರವುಗೊಳಿಸುವುದು, ಇಲ್ಲದೇ ಹೋದಲ್ಲಿ ಅಧಿಕೃತ ಪ್ರಾಧಿಕಾರದಿಂದ ತೆರವು ಕಾರ್ಯಾಚರಣೆ ನಡೆಸಲಿರುವುದಾಗಿ ಜಿಲ್ಲಾಡಳಿತವು ಎಚ್ಚರಿಕೆ ನೀಡಿದೆ.

ಕಾಯ್ದೆ ಪ್ರಕಾರ, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಸಾರ್ವಜನಿಕರು ಯಾವುದೇ ಸಭೆ ಸಮಾರಂಭ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಕೆಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗಿನ 6 ಗಂಟೆ ವರೆಗೆ ಧ್ವನಿವರ್ಧಕಗಳನ್ನು ಬಳಸಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅದಾಗ್ಯೂ ಅನುಮತಿ ನೀಡಲಾಗುವ ಸಮಯದಲ್ಲೂ ಅತಿಯಾದ ಮೈಕ್ ಬಳಸಿದ್ದಲ್ಲಿ ಕಾನೂನು ಕ್ರಮಕ್ಕೆ ಅವಕಾಶವಿರುವುದಾಗಿ ತಿಳಿಸಿದ್ದಾರೆ.

ಶೀಘ್ರವೇ ಇದಕ್ಕೆ ಬೇಕಾಗಿ ರಚಿಸಲಾದ ಸಮಿತಿಯು ಅರ್ಜಿಗಳನ್ನು ವಿಲೇವಾರಿ ಮಾಡುವಂತೆಯೂ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.

ಜಿಲ್ಲೆಗೆ ಅನ್ವಯವಾಗುತ್ತಿರುವ ಈ ನಿಯಮವು ಮುಂದಿನ ದಿನಗಳಲ್ಲಿ ಯಕ್ಷಗಾನ, ಭೂತಕೋಲ, ನಾಟಕ ಪ್ರದರ್ಶನಗಳಿಗೆ ಅಡ್ಡಿಯಾಗಬಹುದೇ ಅನ್ನೋ ಆತಂಕವನ್ನು ಈಗಾಗಲೆ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version