Home ಕ್ರೀಡೆ ಐಪಿಎಲ್ 2022 : ಲಕ್ನೋ ಗೆಲುವಿಗೆ 208 ರನ್ ಗುರಿ ನೀಡಿದ ಆರ್‌ಸಿಬಿ

ಐಪಿಎಲ್ 2022 : ಲಕ್ನೋ ಗೆಲುವಿಗೆ 208 ರನ್ ಗುರಿ ನೀಡಿದ ಆರ್‌ಸಿಬಿ

ರಜತ್ ಪಾಟೀದಾರ್ ದಾಖಲಿಸಿದ ಭರ್ಜರಿ ಶತಕದ ನೆರವಿನಿಂದ ಬ್ಯಾಟಿಂಗ್ನಲ್ಲಿ ಮಿಂಚಿದ ಆರ್‌ಸಿಬಿ, ʻಎಲಿಮಿನೇಟರ್ʼ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಗೆಲುವಿಗೆ 208 ರನ್‌ಗಳ ಕಠಿಣ ಗುರಿ ನೀಡಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ʻಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ನಾಯಕ ಕೆ.ಎಲ್. ರಾಹುಲ್, ಆರ್‌ಸಿಬಿ‌ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಖಾತೆ ತೆರೆಯುವ ಮುನ್ನವೇ ಬೆಂಗಳೂರು ನಾಯಕ ಫಾಫ್ ಡುಪ್ಲೆಸಿಸ್ ಪೆವಿಲಿಯನ್‌ಗೆ ವಾಪಾಸ್ಸಾದರು. ಮತ್ತೊಂದು ತುದಿಯಲ್ಲಿ ನಿಧಾನಗತಿಯಿಂದ ಬ್ಯಾಟ್ ಬೀಸುತ್ತಿದ್ದ ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 25 ರನ್‌ಗಳಿಸಿ ಆವೇಶ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. 9 ರನ್‌ಗಳಿಸುವಷ್ಟರಲ್ಲೇ ಅಪಾಯಕಾರಿ ಬ್ಯಾಟರ್ ಮ್ಯಾಕ್ಸ್‌ವೆಲ್ ನಿರ್ಗಮಿಸಿದರು. 

ಪಾಟೀದಾರ್ ಭರ್ಜರಿ ಶತಕ
ಡುಪ್ಲೆಸಿಸ್ ನಿರ್ಗಮಿಸುತ್ತಲೇ ಕ್ರೀಸ್‌ಗಿಳಿದ ರಜತ್ ಪಾಟೀದಾರ್ ಲಕ್ನೋ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಏಳು ಭರ್ಜರಿ ಸಿಕ್ಸರ್ ಮತ್ತು 12 ಬೌಂಡರಿಗಳ ನೆರವಿನಿಂದ 54 ಎಸೆತಗಳಲ್ಲಿ 112 ರನ್‌ಗಳಿಸಿದ ಪಾಟೀದಾರ್ ಅಜೇಯರಾಗುಳಿದರು. ಕೇವಲ 49 ಎಸೆತಗಳಲ್ಲಿ ಶತಕ ಪೂರೈಸಿದ ರಜತ್, ಸ್ಪಿನ್ನರ್ ರವಿ ಬಿಷ್ಣೋಯ್ ಎಸೆದ ಇನ್ನಿಂಗ್ಸ್‌ನ 17ನೇ ಓವರ್‌ನಲ್ಲಿ 27 ರನ್ ಚಚ್ಚಿದರು  ಆ ಮೂಲಕ ಆರ್‌ಸಿಬಿ ಮೊತ್ತವನ್ನು 200ರ ಗಡಿ ದಾಟಿಸಿದರು. 

ರಜತ್ ಪಾಟೀದಾರ್‌ಗೆ ಅಂತಿಮ ಓವರ್‌ಗಳಲ್ಲಿ ಉತ್ತಮ ಸಾಥ್ ನೀಡಿದ ದಿನೇಶ್ ಕಾರ್ತಿಕ್23 ಎಸೆತಗಳಲ್ಲಿ 37 ರನ್‌ಗಳಿಸಿ ಅಜೇಯರಾಗುಳಿದರು. ಕಾರ್ತಿಕ್ ಇನ್ನಿಂಗ್ಸ್‌ನಲ್ಲಿ 1 ಸಿಕ್ಸರ್ ಮತ್ತು 5 ಬೌಂಡರಿ ಒಳಗೊಂಡಿತ್ತು. ಅಂತಿಮವಾಗಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ 207 ರನ್‌ಗಳಿಸಿ ಇನ್ನಿಂಗ್ಸ್‌ ಮುಗಿಸಿದೆ.

ಲಕ್ನೋ ಬೌಲಿಂಗ್ ವಿಭಾಗದಲ್ಲಿ ಮೊಹ್ಸಿನ್ ಖಾನ್ ಹೊರತುಪಡಿಸಿ ಉಳಿದೆಲ್ಲಾ ಬೌಲರ್‌ಗಳು ದುಬಾರಿಯಾದರು. ತಲಾ ನಾಲ್ಕು ಓವರ್‌ಗಳಲ್ಲಿ ದುಷ್ಮಂತ್ ಚಮೀರಾ 54 ರನ್, ಆವೇಶ್ ಖಾನ್ 44 ಮತ್ತು ರವಿ ಬಿಷ್ಣೋಯ್ 45 ರನ್ ಬಿಟ್ಟುಕೊಟ್ಟರು. 

Join Whatsapp
Exit mobile version