ಮುಂಬೈ ಇಂಡಿಯನ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಭರ್ಜರಿ ಗೆಲುವು ಸಾಧಿಸಿದೆ. ಶ್ರೇಯಸ್ ಅಯ್ಯರ್ ಪಡೆ 24 ರನ್ಗಳಿಂದ ಗೆದ್ದು ಬೀಗಿದೆ.
ಮುಂಬೈನ ಐಕಾನಿಕ್ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಮುಂಬೈ ಬೌಲರ್ಗಳ ಮಾರಕ ದಾಳಿಯ ನಡುವೆಯೂ 169 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 70 ರನ್ ಸಿಡಿಸಿದರು. 20 ಓವರ್ಗಳಲ್ಲಿ ಕೋಲ್ಕತ್ತಾ 169 ರನ್ಗಳಿಗೆ ಆಲೌಟ್ ಆಯಿತು. ನುವಾನ್ ತುಷಾರ ಮತ್ತು ಜಸ್ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಗುರಿ ಬೆನ್ನಟ್ಟಿದ ಮುಂಬೈ ಕೊನೆಯ ಹಂತದಲ್ಲಿ ವಿಫಲವಾಯಿತು. 4 ವಿಕೆಟ್ ಪಡೆದ ಮಿಚೆಲ್ ಸ್ಟಾರ್ಕ್ ಮುಂಬೈ ತಂಡವನ್ನು 145 ರನ್ಗಳಿಗೆ ಆಲೌಟ್ ಮಾಡಿದರು.
170 ರನ್ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಪವರ್ಪ್ಲೇನಲ್ಲೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ (13), ರೋಹಿತ್ ಶರ್ಮಾ (11), ನಮನ್ ಧೀರ್ (11) ಬೇಗನೇ ಔಟಾದರು. ಒಂದೆಡೆ ಸೂರ್ಯಕುಮಾರ್ ಕ್ರೀಸ್ ಕಚ್ಚಿನಿಂತು ಬೌಲರ್ಗಳ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿದ್ದರೆ, ಮತ್ತೊಂದೆಡೆ ಬ್ಯಾಟ್ ಹಿಡಿದು ಬಂದ ಬೌಲರ್ಗಳು ಪೆವಿಲಿಯನ್ ಪರೇಡ್ ನಡೆಸುತ್ತಿದ್ದರು. ಹಾರ್ದಿಕ್ ಪಾಂಡ್ಯ ಡಕೌಟ್ ಆದರೆ, ತಿಲಕ್ ವರ್ಮಾ (4), ನೇಹಾಲ್ ವದೇರಾ (6) ನಿರಾಸೆ ಮೂಡಿಸಿದರು.
ಇದರ ನಡುವೆಯೂ ಸೂರ್ಯಕುಮಾರ್ ಅರ್ಧಶತಕ ಸಿಡಿಸಿದರು. ಸೂರ್ಯಗೆ ಟಿಮ್ ಡೇವಿಡ್ ಸಾಥ್ ನೀಡಿದರು. ಆದರೆ, ಸ್ಕೈ 35 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 56 ರನ್ ಸಿಡಿಸಿ ಕೊನೆಯ ಹಂತದಲ್ಲಿ ಔಟಾದರು. ಇದರೊಂದಿಗೆ ಎಂಐ ಗೆಲುವಿನ ಕನಸು ಕೂಡ ಕಮರಿತು. ಟಿಮ್ ಡೇವಿಡ್ ಸಹ 24 ರನ್ಗಳಿಗೆ ಸುಸ್ತಾದರು. ಕೆಕೆಆರ್ ಬೌಲರ್ಗಳು ಆರಂಭದಿಂದ ಕೊನೆಯವರೆಗೂ ಅದ್ಭುತ ಪ್ರದರ್ಶನ ನೀಡಿದರು
ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಇದು ಸತತ ನಾಲ್ಕನೇ ಮತ್ತು ಒಟ್ಟು ಎಂಟನೇ ಸೋಲಾಗಿದೆ. ಆಡಿದ 11 ಪಂದ್ಯಗಳಲ್ಲಿ ಕೇವಲ 3 ಗೆಲುವು ಕಂಡಿರುವ ಮುಂಬೈಗೆ ಪ್ಲೇ ಆಫ್ ಸ್ಥಾನ ಕನಸಾಗಿದೆ.