ಕೊಲ್ಕತ್ತಾ: ತನ್ನ ರಾಜಕೀಯ ಎದುರಾಳಿ ಕೇಂದ್ರ ಗೃಹಸಚಿವ, ಬಿಜೆಪಿ ನಾಯಕ ಅಮಿತ್ ಶಾ ಅವರನ್ನು ಅಣಕ ಮಾಡುವ ಸಲುವಾಗಿ ತೃಣಮೂಲ ಕಾಂಗ್ರೆಸ್ ತನ್ನ ಕಾರ್ಯಕರ್ತರಿಗಾಗಿ ಟಿ- ಶರ್ಟ್ ಒಂದನ್ನು ವಿನ್ಯಾಸಗೊಳಿಸಿದೆ.
ಟಿ- ಶರ್ಟ್ ಮುಂಭಾಗದಲ್ಲಿ ಅಮಿತ್ ಶಾ ಅವರ ಮುಖದ ಕಾರ್ಟೂನ್ ಫೋಟೊ ಇದ್ದು, ಅದರ ಕೆಳಭಾಗದಲ್ಲಿ ‘ಭಾರತದ ಅತೀ ದೊಡ್ಡ ಪಪ್ಪು’ ಎಂದು ಬರೆಯಲಾಗಿದೆ. ಬಿಳಿ, ಕಪ್ಪು ಮತ್ತು ಹಳದಿ ಬಣ್ಣದಲ್ಲಿ ಈ ಟಿ-ಶರ್ಟ್‌ನ್ನು ಬಿಡುಗಡೆಗೊಳಿಸಲಾಗಿದೆ.
ಬಿಜೆಪಿಯು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ “ಪಪ್ಪು” ಎಂಬ ವಿಶೇಷಣ ನೀಡಿತ್ತು. ಆದರೆ ಇದನ್ನು ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಈಗ ಅಮಿತ್ ಷಾ ಅವರನ್ನೇ ಅಪಹಾಸ್ಯ ಮಾಡಲು ಬಳಸುತ್ತಿದೆ.
ಅಕ್ಟೋಬರ್ ಮೊದಲ ವಾರದಲ್ಲಿ ನಡೆಯುವ ದುರ್ಗಾ ಪೂಜೆಯ ಸಮಯದಲ್ಲಿ ತಮ್ಮ ಕಾರ್ಯಕರ್ತರಿಗೆ ಈ ಟಿ-ಶರ್ಟ್ ನೀಡಲು ತೃಣಮೂಲ ಕಾಂಗ್ರೆಸ್ ಯೋಜನೆ ರೂಪಿಸಿದ್ದು, ಈ ಸಂದರ್ಭದಲ್ಲಿ ಇದು ಹೆಚ್ಚು ಪ್ರಚಾರ ಪಡೆಯಬಹುದೆಂಬ ನಿರೀಕ್ಷೆಯಲ್ಲಿದೆ.
ಅಪಹಾಸ್ಯವು ಸಂವಹನದ ಅತ್ಯಂತ ಶಕ್ತಿಯುತ ರೂಪವಾಗಿದೆ. ಇದು ನಮ್ಮ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮಾಡಿದ ಕಾಮೆಂಟ್‌ನಿಂದ ಪ್ರಾರಂಭವಾಯಿತು ಮತ್ತು ಅದು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಯಿತು. ನಂತರ ಅದು ಟಿ-ಶರ್ಟ್‌ಗಳ ಮೇಲೆ ಬಂದಿತು” ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್ ಪಿಟಿಐಗೆ ತಿಳಿಸಿದ್ದಾರೆ.