Home ಅಪರಾಧ ಭಯೋತ್ಪಾದನೆ ಚಟುವಟಿಕೆಗಾಗಿಯೇ ಬಂದೂಕು ಶೇಖರಣೆ: ಎಸ್.ಡಿ.ಪಿ.ಐ ಆರೋಪ

ಭಯೋತ್ಪಾದನೆ ಚಟುವಟಿಕೆಗಾಗಿಯೇ ಬಂದೂಕು ಶೇಖರಣೆ: ಎಸ್.ಡಿ.ಪಿ.ಐ ಆರೋಪ

 ಚಿಕ್ಕಮಗಳೂರು: ಭಯೋತ್ಪಾದನೆ ಚಟುವಟಿಕೆಗಾಗಿಯೇ ಬಂದೂಕು ಶೇಖರಣೆ ರಾಜ್ಯದಲ್ಲಿ ನಡೆಯುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿದ್ದಾರೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅಕ್ರಮ ನಾಡ ಬಂದೂಕು ದಾಸ್ತಾನು ಮತ್ತು ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿರುವ ಖಚಿತ ಮಾಹಿತಿಯೊಂದಿಗೆ ಭದ್ರಾವತಿ ಗ್ರಾಮಾಂತರ ಪೊಲೀಸರು ಶೋಧ ನಡೆಸಿದಾಗ ಶಂಕರಘಟ್ಟ ನಿವಾಸಿ ಪಾಲಾಕ್ಷಪ್ಪ (47) ಎಂಬಾತನ ಬಳಿ ಸುಮಾರು ವಿವಿಧ ಮಾದರಿಯ 9 ನಾಡ ಬಂದೂಕು ಲಭ್ಯವಾಗಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಅವರು ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದ್ದಾರೆ.

 ತೀರ್ಥಹಳ್ಳಿಯಲ್ಲಿ ಅಕ್ರಮ ನಾಡ ಬಂದೂಕು ದಾಸ್ತಾನು ಮತ್ತು ಮಾರಾಟ  ಅತ್ಯಂತ ಗಂಭೀರವಾದ ಪ್ರಕರಣವಾಗಿದ್ದು, ಬಿಹಾರ, ಉತ್ತರ ಪ್ರದೇಶ  ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಈ ರೀತಿಯ ಬೆಳವಣಿಗೆ ಆಗಿರುವುದು ಅತ್ಯಂತ ಅಪಾಯಕಾರಿ. ಅಲ್ಲದೇ ಇದರ ಹಿಂದೆ ಯಾವ ಸಂಘಟನೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪತ್ತೆ ಹಚ್ಚುವ ಪ್ರಮುಖ ಕೆಲಸವನ್ನು ಪೊಲೀಸ್ ಇಲಾಖೆ ತಕ್ಷಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಆರೋಪಿಗಳಿಗೆ ಬಿಜೆಪಿ ಮತ್ತು ಸಂಘಪರಿವಾರದ ಹಿನ್ನೆಲೆ ಇರುವುದರಿಂದ ಪೊಲೀಸ್ ಇಲಾಖೆ ಯಾವ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಮಣಿಯದೆ, ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿರುವ ಈ ಕ್ರಿಮಿನಲ್ ಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸ ಬೇಕು ಎಂದು ಅಬ್ದುಲ್ ಮಜೀದ್  ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version