ಮಂಗಳೂರು: ಬಿಜೆಪಿ ಸರ್ಕಾರದ ದ್ವೇಷ ಮತ್ತು ದುರಾಡಳಿತದ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಶುಕ್ರವಾರ ಮಂಗಳೂರಿನ ಹೊರವಲಯ ಕಣ್ಣೂರಿನಲ್ಲಿ ಹಮ್ಮಿಕೊಂಡಿರುವ ಜನಾಧಿಕಾರ ಸಮಾವೇಶಕ್ಕೆ ಭರದ ಸಿದ್ಧತೆ ನಡೆದಿದ್ದು, ಬೃಹತ್ ವೇದಿಕೆ ನಿರ್ಮಾಣಗೊಂಡಿದೆ.
ಸಮಾವೇಶಕ್ಕೆ ಕರಾವಳಿ ಜಿಲ್ಲೆಗಳು, ಸಕಲೇಶಪುರ, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಿಂದ 50 ಸಾವಿರಕ್ಕೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆ ಇದೆ. ಕಾರ್ಯಕ್ರಮದ ಸ್ಥಳದಲ್ಲಿ “ಕೆ.ಎಂ.ಶರೀಫ್” ಹೆಸರಿನಲ್ಲಿ ಬೃಹತ್ ವೇದಿಕೆಯಲ್ಲಿ ನಿರ್ಮಾಣಗೊಂಡಿದ್ದು, ವೇದಿಕೆಯಲ್ಲಿ 30ಕ್ಕೂ ಅಧಿಕ ಗಣ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ 2.30ಕ್ಕೆ ಸಮಾವೇಶಕ್ಕೆ ಚಾಲನೆ ದೊರೆಯಲಿದೆ.
ವೇದಿಕೆಯ ಮುಂಭಾಗ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಯಲ್ಲಿ ಪಕ್ಕದಲ್ಲಿರುವ ಮೂರು ಮೈದಾನಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, 1300ಕ್ಕೂ ಅಧಿಕ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ವಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ.
ಈಗಾಗಲೇ ಮಂಗಳೂರು ನಗರ, ಬಂಟ್ವಾಳ, ಪುತ್ತೂರು, ಸುಳ್ಯ ನಗರಗಳಲ್ಲಿ ಕಾರ್ಯಕ್ರಮದ ಪ್ರಚಾರ ಕಾರ್ಯ ನಡೆದಿದ್ದು, ಎಲ್ಲೆಡೆ ಪಕ್ಷದ ಧ್ವಜಗಳು ರಾರಾಜಿಸುತ್ತಿವೆ. ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಈಗಾಗಲೇ ಮಂಗಳೂರು ತಲುಪಿದ್ದು, ಅವರನ್ನು ಜಿಲ್ಲಾ ಸಮಿತಿ ಸದಸ್ಯರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ.
SDPI ರಾಷ್ಟ್ರೀಯ ಅಧ್ಯಕ್ಷ ಎಂ. ಕೆ. ಫೈಝಿ, SDPI ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು, SDPI ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಕೇರಳ ರಾಜ್ಯಾಧ್ಯಕ್ಷ ಅಶ್ರಫ್ ಮೌಲವಿ ಮುವಾಟ್ಟುಪುಝ, ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ , ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸೋ ಫ್ರಾಂಕೋ, SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಬಾಸ್ಕರ್ ಪ್ರಸಾದ್ ನೆಲಮಂಗಲ, ಮುಖಂಡರಾದ ಅಬ್ದುಲ್ ಲತೀಫ್ ಪುತ್ತೂರು, ಆನಂದ್ ಮಿತ್ತಬೈಲ್, ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ, ನಝೀರ್ ಉಡುಪಿ, ತೌಫೀಕ್, ಅಥಾವುಲ್ಲಾ ಜೋಕಟ್ಟೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.