Home ಟಾಪ್ ಸುದ್ದಿಗಳು ಮುಂದಿನ ಚುನಾವಣೆಗೂ ನನ್ನದೇ ನಾಯಕತ್ವ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಮುಂದಿನ ಚುನಾವಣೆಗೂ ನನ್ನದೇ ನಾಯಕತ್ವ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ‘ಎರಡು ವರ್ಷದ ನಂತರ 130 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸವಾಲು ನನ್ನ ಮುಂದೆ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.


‘ವರಿಷ್ಠರು ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುವೆ’ ಎಂದು ತಿಂಗಳ ಹಿಂದಷ್ಟೇ ಹೇಳಿದ್ದ ಯಡಿಯೂರಪ್ಪ, ‘ಇನ್ನೂ ಒಳ್ಳೆಯ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನಗಳನ್ನು ಬರುವಂತಹ ಎರಡು ವರ್ಷಗಳಲ್ಲಿ ಮಾಡಬೇಕಾಗಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಸಲುವಾಗಿ ಈಗಿನಿಂದಲೇ ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತೇನೆ ಎಂದು ಕಾರ್ಯಕರ್ತರಿಗೆ, ರಾಜ್ಯದ ಜನರಿಗೆ ಭರವಸೆ ನೀಡುತ್ತೇನೆ’ ಎಂದು ದಿಢೀರ್ ಹೇಳಿಕೆ ನೀಡಿರುವುದು ಜಿಜ್ಞಾಸೆಗೆ ಗ್ರಾಸವಾಗಿದೆ.


ರಾಜಭವನಕ್ಕೆ ಬುಧವಾರ ಸಂಜೆ ಭೇಟಿ ನೀಡಿದ್ದ ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಲ್ಲಿಂದ ತಮ್ಮ ಮನೆಗೆ ಹಿಂತಿರುಗುವ ಮುನ್ನ ರಾಜಭವನದ ಎದುರು ಸುದ್ದಿಗಾರರ ಜತೆ ಮಾತನಾಡಿದರು. ಈ ರಾಜಕೀಯ ಹೇಳಿಕೆಗಳ ಮಧ್ಯೆಯೇ ಯಡಿಯೂರಪ್ಪ, ಮುಂದಿನ ಚುನಾವಣೆಯ ನಾಯಕತ್ವವೂ ತಮ್ಮದೇ ಎಂದು ಹೇಳಿರುವುದು ನಾನಾ ರೀತಿಯ ರಾಜಕೀಯ ವಿಶ್ಲೇಷಣೆಗೂ ಕಾರಣವಾಗಿದೆ. ಹೀಗೆ ಹೇಳುವ ಮೂಲಕ ‘ಮುಖ್ಯಮಂತ್ರಿ ಸ್ಥಾನದಿಂದ ತಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಅವರು ವರಿಷ್ಠರಿಗೆ ರವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

Join Whatsapp
Exit mobile version