ಟಿಕೆಟ್ ಕೊಟ್ಟರೆ ಬಿಜೆಪಿಯಿಂದ, ಇಲ್ಲದಿದ್ದರೆ ಇಂಡಿಪೆಂಡೆಂಟ್ ಆಗಿ ಸ್ಪರ್ಧಿಸುತ್ತೇನೆ: ಗೂಳಿಹಟ್ಟಿ ಶೇಖರ್

Prasthutha|

ಹೊಸದುರ್ಗ: ಟಿಕೆಟ್ ಕೊಟ್ರೆ ಬಿಜೆಪಿಯಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಖಂಡಿತವಾಗಿ ಇಂಡಿಪೆಂಡೆಂಟ್ ಆಗಿ ನಿಲ್ಲುತ್ತೇನೆ. ಮುಂದೆ ಬರುವ ಲೋಕಸಭೆ ಚುನಾವಣೆಗೂ ನಿಂತುಕೊಳ್ಳುತ್ತೇನೆ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಸವಾಲು ಹಾಕಿದ್ದಾರೆ.

- Advertisement -


ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ ಗೆಲುವು ಪಡೆದವನು. ಈಗ ಬಿಜೆಪಿ ಪಕ್ಷದಲ್ಲಿದ್ದೇನೆ. ಪಕ್ಷ ಗುರುತಿಸಿ ಮತ್ತೊಮ್ಮೆ ಟಿಕೆಟ್ ನೀಡಿದರೆ ಬಿಜೆಪಿಯಿಂದ ಕಣಕ್ಕಿಳಿಯುತ್ತೇನೆ. ನಿರಾಕರಿಸಿದರೆ ನನ್ನದೇ ಆದ ಸಂಘಟನೆ ಮಾಡಿಕೊಂಡು ಪಕ್ಷೇತರನಾಗಿ ವಿಧಾನಸಭಾ ಚುನಾವಣೆ ಎದುರಿಸಲು ಸಿದ್ಧನಿದ್ದೇನೆ. ಮುಂದೆ ಬರುವ ಲೋಕಸಭಾ ಚುನಾವಣೆಗೂ ಸ್ಪರ್ಧಿಸುತ್ತೇನೆ. ಅಲ್ಲಿಯವರೆಗೂ ಪಕ್ಷದಲ್ಲಿ ಯಾವುದೇ ಗೊಂದಲಮಾಡುವುದು ಬೇಡ. ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ನನ್ನ ಕರ್ತವ್ಯ. ಮುಂದಿನ ಮೂರು ತಿಂಗಳು ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಆಗಬಾರದೆಂದು ಮುಖಂಡರೆಲ್ಲ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಹೇಳಿದರು.


ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಮುಖಂಡರ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದು, ಅವರೆಲ್ಲ ಮುಖಂಡರ ನಡುವೆ ಹಂಚಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಬಗ್ಗೆ ವಿಶ್ವಾಸ ಹೊಂದಿದ್ದು, ಟಿಕೆಟ್ ಕೊಟ್ಟರೆ ಬಿಜೆಪಿ ಇಲ್ಲದಿದ್ದರೆ ನನ್ನ ಹಾದಿ ನನಗೆ ಎಂಬ ಸಂದೇಶ ರವಾನಿಸಿದ್ದಾರೆ.

- Advertisement -


ಹೊಸದುರ್ಗ ವಿಧಾನಸಭೆ ಕ್ಷೇತ್ರ ಸಾಮಾನ್ಯವಾಗಿದ್ದರೂ ಪರಿಶಿಷ್ಟ ಜಾತಿಗೆ ಸೇರಿರುವ ಗೂಳಿಹಟ್ಟಿ ಶೇಖರ್ ಎರಡು ಬಾರಿ ಗೆದ್ದಿದ್ದಾರೆ. 2018ರಲ್ಲಿ ಗೆಲುವು ಸಾಧಿಸಿದ್ದ ಗೂಳಿಹಟ್ಟಿ ಶೇಖರ್ ಸಹಜವಾಗಿ ಬಿಜೆಪಿಯಿಂದ ಮರು ಸ್ಪರ್ಧೆ ಬಯಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ತಾಲೂಕು ಬಿಜೆಪಿಯಲ್ಲಿ ಅನೇಕ ರಾಜಕೀಯ ಬದಲಾವಣೆಗಳಾಗಿವೆ. ಇತ್ತೀಚೆಗೆ ಪಕ್ಷದೊಳಗಿನ ಮುಸುಕಿನ ಗುದ್ದಾಟ ಆಕಾಂಕ್ಷಿಗಳ ಹೆಚ್ಚಳಕ್ಕೆ ಕಾರಣವಾಗಿತ್ತು.

Join Whatsapp
Exit mobile version