ಪಾಟ್ನ: ನನಗೆ ಮುಖ್ಯಮಂತ್ರಿ ಆಗುವ ತರಾತುರಿಯೂ ಇಲ್ಲ, ಇರಾದೆಯೂ ಇಲ್ಲ ಎಂದು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸ್ಪಷ್ಟಪಡಿಸಿದ್ದಾರೆ.
ಬಿಹಾರದ ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಜಗದಾನಂದ ಸಿಂಗ್ ಅವರು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು 2023ರಲ್ಲಿ ನಿತೀಶ್ ಕುಮಾರ್ ರಿಂದ ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳುವರು ಎಂದು ಸೆಪ್ಟೆಂಬರ್ ಕೊನೆಯ ದಿನ ಹೇಳಿದ್ದರು. ಅದಕ್ಕೆ ಅಕ್ಟೋಬರ್ ಮೊದಲ ದಿನವೇ ತೇಜಸ್ವಿ ಯಾದವ್ ಉತ್ತರಿಸಿ, ಇಂತಹ ಉದ್ದೇಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಮುಖ್ಯ ಉದ್ದೇಶ ಬಿಜೆಪಿ ಮತ್ತು ಆರೆಸ್ಸೆಸ್ಸನ್ನು ಅಧಿಕಾರದಿಂದ ಕೆಳಗಿಳಿಸುವುದು. ಅದನ್ನು ನಾವು ಬಿಹಾರದಲ್ಲಿ ಸಾಧಿಸಿದ್ದೇವೆ ಎಂದು ಅವರು ಹೇಳಿದರು.
“ಸದ್ಯದ ನಮ್ಮ ಆದ್ಯ ಗುರಿ ಪ್ರತಿ ಪಕ್ಷಗಳನ್ನು ಒಗ್ಗೂಡಿಸುವುದಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರ ಹೇಳಿಕೆ ಅವರ ಆಶಯವಷ್ಟೆ. ಈಗ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿದ್ದು, ನಮ್ಮ ಸರಕಾರವು ಉತ್ತಮವಾಗಿ ಕೆಲಸ ಮಾಡುತ್ತಿದೆ” ಎಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾಧ್ಯಮಗಳಿಗೆ ಹೇಳಿದರು.
ಲಾಲೂ ಪ್ರಸಾದ್ ಯಾದವ್ “ನನ್ನ ಸಣ್ಣ ಮಗ ತೇಜಸ್ವಿ ಮುಖ್ಯಮಂತ್ರಿ ಆಗಿಯೇ ಆಗುತ್ತಾನೆ” ಎಂದು ಹೇಳಿದ್ದರೆ, ಆರ್ ಜೆಡಿ ವಕ್ತಾರ ಭಾಯಿ ಬೀರೇಂದ್ರ ಅವರು ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುವ ದಿನಗಳು ದೂರವಿಲ್ಲ ಎಂದು ಹೇಳಿದ್ದರು.
ನಿತೀಶ್ ಕುಮಾರ್ ತಮ್ಮ 5 ವರ್ಷಗಳ ಪೂರ್ಣಾವಧಿ ಪೂರೈಸುತ್ತಾರೆ ಎಂದು ಜೆಡಿಯು ಹೇಳಿಕೆ ನೀಡಿದೆ.
ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಮುಹಮ್ಮದ್ ಜಮಾ ಖಾನ್ ಅವರು ಜನರ ಆಶಯದಂತೆ ನಿತೀಶ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಹೇಳಿದರು.
“ಜಗದಾನಂದ್ ಸಿಂಗ್ ಬಾಬು ಅವರ ಹೇಳಿಕೆಯ ಬಗ್ಗೆ ನಮ್ಮ ಯಾವ ಆಕ್ಷೇಪಣೆಯೂ ಇಲ್ಲ. ಎಲ್ಲ ಪಕ್ಷದವರೂ ತಮ್ಮ ನಾಯಕನನ್ನು ಮೇಲೆ ಕೂರಿಸಲು ಪ್ರಯತ್ನಿಸುವುದು ಸಹಜ. ಸದ್ಯ ಸ್ಥಿತಿ ಸಹಜವಾಗಿದೆ” ಎಂದು ಜೆಡಿಯು ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಹೇಳಿದರು.
“ನಿತೀಶ್ ಅವರು ಬಿಜೆಪಿಗೆ ಕೈ ಕೊಟ್ಟರು, ಎರಡು ಬಾರಿ ಲಾಲೂ ಪ್ರಸಾದರಿಗೆ ಕೈ ಕೊಟ್ಟವರು. ಇವರನ್ನು ಹೇಗೆ ನಂಬುವುದು. ಬಿಹಾರದಲ್ಲಿ 10 ವರ್ಷದಿಂದ ಇದೇ ನಾಟಕ” ಎಂದರು ಬಿಜೆಪಿಯ ರಾಜ್ಯ ಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಲೇವಡಿ ಮಾಡಿದ್ದಾರೆ.
“ಹಾಗೆ ಆರ್ ಜೆಡಿಯವರು ತೇಜಸ್ವಿಯವರನ್ನು ಮುಖ್ಯಮಂತ್ರಿ ಮಾಡಲು ಬಯಸಿದರೆ ಜೆಡಿಯು ಶಾಸಕರನ್ನು ಒಡೆದುಕೊಂಡು ಬಂದು ಅಧಿಕಾರ ಹಿಡಿಯಲಿ” ಎಂದು ಬಿಹಾರದ ಬಿಜೆಪಿ ಉಪಾಧ್ಯಕ್ಷ ರಾಜೀಬ್ ರಂಜನ್ ಹೇಳಿದರು.
ಆರ್ ಜೆಡಿಗೆ ತೇಜಸ್ವಿಯವರನ್ನು ಮುಖ್ಯಮಂತ್ರಿ ಮಾಡುವ ಆತುರ ಇದೆಯೆಂದರೆ ಈ ಮೈತ್ರಿ ಸರಕಾರದಲ್ಲಿ ಪರಸ್ಪರ ಗೌರವ, ನಂಬಿಕೆ ಇಲ್ಲ ಎಂದೂ ರಾಜೀಬ್ ತಿಳಿಸಿದರು.