ನವದೆಹಲಿ: ಕಳೆದ ಮೇ ತಿಂಗಳಿನಲ್ಲಿ ಉದಯಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಚಿಂತನ ಶಿಬಿರದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ತೀರ್ಮಾನಕ್ಕೆ ಬದ್ಧರಾಗಿ ರಾಜ್ಯ ಸಭೆಯಲ್ಲಿ ಪ್ರತಿ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಹಿರಿಯ ಮುಖಂಡರಾದ ದಿಗ್ವಿಜಯ ಸಿಂಗ್ ಇಲ್ಲವೇ ಚಿದಂಬರಂ ಆಯ್ಕೆಯಾಗುವರು ಎಂಬ ನಿರೀಕ್ಷೆ ಆರಂಭವಾಗಿದೆ.
ಎಐಸಿಸಿ ಅಧ್ಯಕ್ಷ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸಭಾ ಪ್ರತಿ ಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಹುತೇಕ ಖರ್ಗೆಯವರೇ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷರಾಗುವರು ಎಂದು ನಿರೀಕ್ಷಿಸಲಾಗಿದೆ.
ಎಐಸಿಸಿ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಬೆನ್ನಿಗೆ ಅಕ್ಟೋಬರ್ 1ರಂದು ಖರ್ಗೆ ಅವರು ರಾಜ್ಯ ಸಭಾ ಪ್ರತಿ ಪಕ್ಷ ನಾಯಕನ ಸ್ಥಾನ ತೊರೆದಿದ್ದಾರೆ. ಸೆಪ್ಟೆಂಬರ್ 30ರ ರಾತ್ರಿಯೇ ರಾಜೀನಾಮೆ ಪತ್ರವನ್ನು ಅವರು ಕಳುಹಿಸಿದ್ದಾರೆ.
ಈಗ ಎಐಸಿಸಿ ಅಧ್ಯಕ್ಷ ಸ್ಪರ್ಧೆಯಲ್ಲಿ ಇರುವ ಇನ್ನೊಬ್ಬರು ಶಶಿ ತರೂರ್. ಖರ್ಗೆ ದಲಿತ ಜನಾಂಗದಿಂದ ಬಂದ ಹೆಚ್ಚು ನಿರೀಕ್ಷೆಯ ಅಭ್ಯರ್ಥಿ ಎನ್ನಲಾಗಿದೆ. ಮೂರನೆಯ ಸ್ಪರ್ಧಿಯಾಗಿ ಜಾರ್ಖಂಡ್ ನ ಕೆ. ಎನ್. ತ್ರಿಪಾಠಿ ಇದ್ದರೂ ಅವರ ಸ್ಪರ್ಧೆಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ.
ನಾಮಪತ್ರಗಳು ಸಲ್ಲಿಕೆಯಾಗುತ್ತಲೇ ದಿಲ್ಲಿಯ ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯು ಬಹು ಕಾಲದ ಬಳಿಕ ಬಹು ಚಟುವಟಿಕೆಯ ಕೇಂದ್ರವಾಗಿ ಬದಲಾಗಿದೆ.
ಖರ್ಗೆಯವರು ಹಿರಿಯ ಕಾಂಗ್ರೆಸ್ ನಾಯಕರೊಡಗೂಡಿ 14 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಅವರ ಸುತ್ತ ಅಶೋಕ್ ಗೆಹ್ಲೋತ್, ದಿಗ್ವಿಜಯ ಸಿಂಗ್, ಎ. ಕೆ. ಆಂಟನಿ, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್ ಮೊದಲಾದ ಹಿರಿಯರಲ್ಲದೆ ಜಿ23 ಜಿಂಜರ್ ಗುಂಪು ಎನ್ನಲಾದವರಲ್ಲಿ ಆನಂದ್ ಶರ್ಮಾ, ಭೂಪಿಂದರ್ ಹೂಡಾ, ಪೃಥ್ವಿರಾಜ್ ಚೌಹಾಣ್, ಮನೀಶ್ ತಿವಾರಿ ಮೊದಲಾದವರು ಇದ್ದರು.