ಪುತ್ತೂರು: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿ ಬಿಜೆಪಿಯ ಅರುಣ್ ಕುಮಾರ್ ಪುತ್ತಿಲ ನನ್ನ ಬಗ್ಗೆ ಉಲ್ಲೇಖಿಸಿರುವ ಹೇಳಿಕೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಸಂತ್ರಸ್ತೆ ಮನೆಗೆ ಶನಿವಾರ ಭೇಟಿ ನೀಡಿದ ಅವರು, ಪಕ್ಷ ಬೇಧ ಮಾಡದೆ ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎನ್ನುವ ದೃಷ್ಟಿಯಿಂದ ಎರಡೂ ಕುಟುಂಬದ ಇಬ್ಬರಿಗೂ ಮದುವೆ ಮಾಡಿಸಲು ಹೇಳಿದ್ದೆ. ಏಕೆಂದರೆ ಹೆಣ್ಣು ಮಗಳಿಗೆ ಅನ್ಯಾಯ ಆಗಬಾರದು ಎನ್ನುವುದು ನನ್ನ ಕಳಕಳಿಯಾಗಿತ್ತು ಎಂದರು.
ಮಧ್ಯಸ್ಥಿಕೆ ವಹಿಸಿದ್ದ ಶಾಸಕ ಅಶೋಕ್ ರೈ ಇಬ್ಬರಿಗೆ ಮದುವೆ ಮಾಡಿಸಿ ಪ್ರಕರಣ ಇತ್ಯರ್ಥ ಪಡಿಸಬೇಕಿತ್ತು ಎಂದು ಪುತ್ತಿಲ ಹೇಳಿದ್ದಾರೆ. ಎರಡೂ ಕುಟುಂಬದವರು ನನ್ನನ್ನು ಸಂಪರ್ಕಿಸಿದ ಸಂದರ್ಭದಲ್ಲಿ ನಾನು ಆ ಪ್ರಯತ್ನ ಮಾಡಿದ್ದೆ. ಏಕೆಂದರೆ ಆರೋಪಿ ಸ್ಥಾನದಲ್ಲಿರುವ ಯುವಕ ಚುನಾವಣೆಯಲ್ಲಿ ಪುತ್ತಿಲ ಅವರ ಪರ ಪ್ರಚಾರ ಮಾಡಿದವನು. ಇದನ್ನು ರಾಜಕೀಯ ದೃಷ್ಟಿಯಿಂದ ನೋಡುವುದಿದ್ದರೆ ಬೇರೆ ದಿಕ್ಕಿನತ್ತ ಹೋಗುತಿತ್ತು. ನಾನು ಆ ತರಹ ಯೋಚಿಸಿಲ್ಲ ಎಂದರು.
