Home ಟಾಪ್ ಸುದ್ದಿಗಳು ಎತ್ತಿನಹೊಳೆ ಯೋಜನೆಗೆ ಭಾರಿ ಹಿನ್ನಡೆ: ಹೆಚ್ಚುವರಿ ಅರಣ್ಯ ಬಳಕೆಗೆ ಅನುಮೋದನೆ ನಿರಾಕರಿಸಿದ ಕೇಂದ್ರ

ಎತ್ತಿನಹೊಳೆ ಯೋಜನೆಗೆ ಭಾರಿ ಹಿನ್ನಡೆ: ಹೆಚ್ಚುವರಿ ಅರಣ್ಯ ಬಳಕೆಗೆ ಅನುಮೋದನೆ ನಿರಾಕರಿಸಿದ ಕೇಂದ್ರ

0

ನವದೆಹಲಿ: ಹಾಸನ ಜಿಲ್ಲೆಯ ಸಕಲೇಶಪುರ ಪರಿಸರದಿಂದ ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಹರಿಸುವ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಗೆ ಇದೀಗ ಕೇಂದ್ರ ಸರ್ಕಾರ ಶಾಕ್ ನೀಡಿದೆ.

ಯೋಜನೆಗೆ ಅಗತ್ಯವಿದ್ದ ಹೆಚ್ಚುವರಿ 423 ಎಕರೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯ ಅನುಮೋದನೆ ನಿರಾಕರಿಸಿದೆ. ಇದರಿಂದ, ಯೋಜನೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಎದುರಾಗಿದೆ. ಹಾಸನ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯ 432 ಎಕರೆ ಅರಣ್ಯ ಭೂಮಿಯನ್ನು ‘ಗುರುತ್ವಾಕರ್ಷಣೆ ಕಾಲುವೆ’ ನಿರ್ಮಾಣಕ್ಕೆ ಬಳಸುವ ನಿಟ್ಟಿನಲ್ಲಿ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಸಚಿವಾಲಯದ ಅರಣ್ಯ ಸಲಹಾ ಸಮಿತಿಯ ಅಧೀನದಲ್ಲಿದ್ದ ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು.

ಜೂನ್ 26ರಂದು ದೆಹಲಿಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಹೆಚ್ಚುವರಿ ಅರಣ್ಯ ಭೂಮಿ ಬಳಕೆ ಪ್ರಸ್ತಾವನೆ ಕುರಿತು ಚರ್ಚೆಯಾಗಿತ್ತು. ಅಂತಿಮವಾಗಿ ಕೇಂದ್ರ ಅರಣ್ಯ ಇಲಾಖೆಯು ಹೆಚ್ಚುವರಿ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡಿಲ್ಲ.

ಯೋಜನೆಗೆ ಅರಣ್ಯ ಭೂಮಿ ಬಳಕೆಗೆ ಕೇಂದ್ರ ಪರಿಸರ ಸಚಿವಾಲಯದಿಂದ ಅನುಮೋದನೆ ಲಭ್ಯವಾಗುವ ಮೊದಲೇ ಅರಣ್ಯ ಭೂಮಿಯನ್ನು ಬಳಸಲಾಗಿದೆ ಎಂದು ಡಿಐಜಿಎಫ್ ಪ್ರಣಿತಾ ಪೌಲ್ ನೇತೃತ್ವದ ಅಧಿಕಾರಿಗಳ ತಂಡ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version