Home ಅಂಕಣಗಳು ಹಿಜಾಬ್ ಮುಸ್ಲಿಮ್ ಮಹಿಳೆಯ ಅಸ್ಮಿತೆ

ಹಿಜಾಬ್ ಮುಸ್ಲಿಮ್ ಮಹಿಳೆಯ ಅಸ್ಮಿತೆ

ಹಿಜಾಬ್ ಇಷ್ಟೊಂದು ಜ್ವಲಂತ ವಿಷಯವಾಗಿ ಪರಿಣಮಿಸಿರುವುದು ಆಶ್ಚರ್ಯವಲ್ಲ. ಕಳೆದ 10 ವರ್ಷಗಳ ಹಿಂದೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲೊಂದು-ಇಲ್ಲೊಂದು ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಆಕ್ಷೇಪ ಎತ್ತಿರುವ ಘಟನೆಗಳು ತಲೆಯೆತ್ತಿ ಸ್ಥಳೀಯವಾಗಿ ಸುದ್ದಿ ಗದ್ದಲವಾಗಿತ್ತು. ಅವುಗಳು ಅಲ್ಲಿಂದಲ್ಲಿಗೇ ತಣ್ಣಗಾಗಿತ್ತು. ಒಂದೆರಡು ಸಂದರ್ಭಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಗಳಿಗೆ ಕ್ಯಾಂಪಸ್‌ನಲ್ಲಿ ಅಸಹನೀಯ ಪರಿಸ್ಥಿತಿ ಉಂಟಾದ ಕಾರಣಕ್ಕಾಗಿ ಬೇರೊಂದು ಕಾಲೇಜಿಗೆ ಸೇರುವ ಅನಿವಾರ್ಯತೆಯೂ ಎದುರಾಗಿತ್ತು. ಇದೀಗ ಹಿಜಾಬ್ ಜ್ವಾಲಾಮುಖಿಯಂತೆ ಸ್ಫೋಟಕ ವಿಷಯವಾಗಿ ದೇಶ-ವಿದೇಶಗಳಲ್ಲೂ ಸುದ್ದಿಯಾಗಿದೆ. ಕ್ಯಾಂಪಸ್ ಎಂಬುದು ಅಸಹಿಷ್ಣುತೆಯ ತಾಣವಾಗಿ ಬದಲಾಗಿದೆ. ಸಮಭಾವ- ಸಹಿಷ್ಣುತೆ- ಭಾವೈಕ್ಯತೆಯ ಪಾಠಶಾಲೆಯಾಗಿ ಇರಬೇಕಾದ ನೆಲೆ, ಇಂದು ಅಸಹಿಷ್ಣುತೆಯ ಹಾಗೂ ದ್ವೇಷ-ಪ್ರತೀಕಾರ ರಣರಂಗವಾಗಿ ಕಂಪಿಸುತ್ತಿದೆ.

ಉಡುಪಿ ಸರಕಾರಿ ಜೂನಿಯರ್ ಕಾಲೇಜು,  ಕುಂದಾಪುರ ಭಂಡಾರ್ಕರ್ ಕಾಲೇಜಿನಲ್ಲಿ ನಡೆದಿರುವ ಹಿಜಾಬ್ ವಿವಾದದ ಹಿಂದಿನ ಹಕೀಕತ್ತು ಏನೆಂದು ನೋಡಬೇಕಲ್ಲವೇ ?. 2021ರ ಡಿಸೆಂಬರ್ ತಿಂಗಳಲ್ಲಿ ಎಬಿವಿಪಿ ಎಂಬ ತೀವ್ರವಾದಿ ವಿದ್ಯಾರ್ಥಿ ಸಂಘಟನೆಯು ಉಡುಪಿಯಲ್ಲಿ ಪ್ರತಿಭಟನಾ ಸಭೆಯನ್ನು ಏರ್ಪಡಿಸಿತ್ತು. ಮಣಿಪಾಲದ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ನಡೆದ ಪ್ರತಿಭಟನೆಯಾಗಿತ್ತದು. ಆ ಪ್ರತಿಭಟನೆಗೆ ಉಡುಪಿ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಕರೆತರಲಾಗಿತ್ತು. ಶಿಕ್ಷಕರು ಕೂಡಾ ಪಾಲ್ಗೊಂಡಿದ್ದರು.

ವಿಶೇಷವೇನೆಂದರೆ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆತರಲಾಗಿತ್ತು. ಜೊತೆಗೆ ಅವರೆಲ್ಲರೂ ಸ್ಕಾರ್ಫ್ ಯಾ ಹಿಜಾಬ್ ಹಾಕಿಕೊಂಡು ಬರಬೇಕೆಂದು ತಾಕೀತು ಕೂಡಾ ಮಾಡಲಾಗಿತ್ತು. ಎಬಿವಿಪಿ ಪ್ರತಿಭಟನೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸಹಭಾಗಿಗಳು ಎಂದು ತೋರಿಸುವ ಉದ್ದೇಶದಿಂದ ಹಿಜಾಬ್ ಹಾಕಬೇಕೆಂಬುದೇ ಆ ನಿರ್ದೇಶನವಾಗಿತ್ತು. ಭಾಗವಹಿಸಿದ ನಂತರವೇ ಆ ಮುಸ್ಲಿಂ ಹೆಣ್ಣುಮಕ್ಕಳಿಗೆ ಅರಿವಾದದ್ದು ಅದು ಎಬಿವಿಪಿ ಪ್ರಾಯೋಜಿತ ಕಾರ್ಯಕ್ರಮವೆಂದು. ಮೊದಲೇ ಗೊತ್ತಿದ್ದರೆ ಖಂಡಿತವಾಗಿಯೂ ಅವರು ಭಾಗವಹಿಸುತ್ತಿರಲಿಲ್ಲ. ಏನೆ ಇರಲಿ ಆ ವಿದ್ಯಾರ್ಥಿನಿಯರ ನಡುವೆ ಅನೇಕ ಪ್ರಶ್ನೆಗಳು ಎದುರಾಗುತ್ತವೆ.

ಈವರೆಗೆ ನ್ಯಾಯಯುತವಾಗಿ ಹಿಜಾಬ್ ಧರಿಸಲು ಕಾಲೇಜು ಪ್ರಿನ್ಸಿಪಾಲ್‌ರಲ್ಲಿ ಅನುಮತಿ ಕೇಳಿದ್ದಾಗ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದವರು ಆಗ ನಮ್ಮ ಹಿಜಾಬನ್ನು ಬಳಸಿದ್ದು ಯಾಕೆ? ಕಾರ್ಯಕ್ರಮಕ್ಕೆ ಬರಬೇಕೆಂದಿದ್ದ ಪ್ರಿನ್ಸಿಪಾಲ್ ಎಬಿವಿಪಿ ಪ್ರಾಯೋಜಿತ ಕಾರ್ಯಕ್ರಮ ಎಂಬುದನ್ನು ಮರೆಮಾಚಿ ಹಿಜಾಬ್ ಧಸಬೇಕೆಂದು ಕಟ್ಟಪ್ಪಣೆ ನೀಡಿದ್ದಾದರೆ ಅದೇ ಹಿಜಾಬನ್ನು ಕಾಲೇಜಿನಲ್ಲಿ ಯಾಕೆ ಧರಿಸಬಾರದು?

ಹಿಜಾಬ್ ಧರಿಸಿ ಕಾಲೇಜಿಗೆ ಬರುವುದು ಧಾರ್ಮಿಕ ಸೌಹಾರ್ದತೆಗೆ ಅಡ್ಡಿಯಾಗುವುದಾದರೆ, ಕುಂಕುಮ, ತಿಲಕ, ನಾಮ ಹಚ್ಚಿಕೊಂಡು ಬರುವುದು ಹಾಗೂ ಕಾಲೇಜಿನಲ್ಲಿ ದೇವರುಗಳ ಫೋಟೋ ಇಡುವುದು, ಶಾರದಾ ಪೂಜೆ ಮಾಡುವುದು, ರಕ್ಷಾಬಂಧನ ಕಟ್ಟುವುದು ಇತ್ಯಾದಿಗಳೆಲ್ಲ ಧಾರ್ಮಿಕ ಸೌಹಾರ್ದತೆ ಅಡ್ಡಿ ಆಗಬೇಕಲ್ಲವೇ? ಎಂಬಿತ್ಯಾದಿ ಪ್ರಶ್ನೆ ವಿಚಾರಗಳು ಸಹಜವಾಗಿ ಅವರ ನಡುವೆ ಚರ್ಚೆಯಾಯಿತು. ಏನೇ ಇರಲಿ ನಾವು ಹಾಗೂ ನಮ್ಮ ಪಾಲಕರು ಅನೇಕ ಬಾರಿ ಅತ್ಯಂತ ಪ್ರಾಮಾಣಿಕವಾಗಿ ಹಿಜಾಬ್‌ಗೆ ಅನುಮತಿ ಕೇಳಿದ್ದಕ್ಕೆ ಕ್ಯಾರೇ ಅನ್ನದ ಪ್ರಿನ್ಸಿಪಾಲ್ ಪೂರ್ವಗ್ರಹಪೀಡಿತರಾಗಿದ್ದಾರಲ್ಲದೆ ಸ್ವತಃ ಸೌಹಾರ್ದತೆಗೆ ಅಡ್ಡಿಯಾಗಿದ್ದಾರೆ ಅನ್ನುವುದು ತಿಳಿಯಲು ಆ ವಿದ್ಯಾರ್ಥಿನಿಯರಿಗೆ ಹೆಚ್ಚಿನ ಸಮಯ ಬೇಕಾಗಿರಲಿಲ್ಲ.

 ಹಿಜಾಬ್ ಖಂಡಿತವಾಗಿಯೂ ಯಾರಿಗೂ ಯಾವುದೇ ತೊಂದರೆಯಾಗಲಿ ತರಗತಿಯೊಳಗೆ ಸೌಹಾರ್ದಕ್ಕೆ ಧಕ್ಕೆ ಮಾಡುತ್ತಿಲ್ಲವಲ್ಲ. ಮತ್ಯಾಕೆ ನನ್ನ ಮೇಲೆ ಪ್ರಿನ್ಸಿಪಾಲರ ದಬ್ಬಾಳಿಕೆ? ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು.

ಸಹಜವಾಗಿ ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿನಿಯರನ್ನು ಕ್ಲಾಸಿನಿಂದ ಹೊರಹಾಕುವುದು, ಬೆದರಿಸುವುದು, ಕಿರುಕುಳ ನೀಡುವುದು ನಡೆಯಿತು. ನಮ್ಮದೇ ಕಾಲೇಜಿನ ವಿದ್ಯಾರ್ಥಿನಿಯರು ಎಂಬ ಕನಿಷ್ಠ ಮಮತೆಯು ಶಿಕ್ಷಕರಿಗಾಗಲೀ ಪ್ರಿನ್ಸಿಪಾಲರಿಗಾಗಲೀ ಇಲ್ಲವಾಯಿತು.

 ಭಾರತದ ಸಂವಿಧಾನದ ಅಧ್ಯಾಯ-೧೪ ಮತ್ತು ೨೫ರಲ್ಲಿ ಪ್ರತಿಯೊಬ್ಬ ಭಾರತೀಯನಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ನೀಡಲಾಗಿದೆ. ಧಾರ್ಮಿಕ ನಂಬಿಕೆ, ಆಚಾರ-ವಿಚಾರಗಳನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ಭಾರತೀಯ ಪ್ರಜೆಯು ನಡೆಸಬಹುದು. ಹಿಜಾಬ್ ಎಂಬುದು ಮುಸ್ಲಿಂ ಮಹಿಳೆಯರ ಧಾರ್ಮಿಕ ನಂಬಿಕೆಯ ವಸ್ತ್ರಧಾರಣೆಯಾಗಿದೆ.

ಯಾವ ರೀತಿಯಲ್ಲಿ ಹಿಂದೂ ಮಹಿಳೆಯರು ತಿಲಕ, ಕುಂಕುಮ, ಕೈಬಳೆ, ಕಾಲ್ಬಳೆ, ಕರಿಮಣಿ ಸರ ಇತ್ಯಾದಿಗಳನ್ನು ಧರಿಸುತ್ತಾರೋ ಅದೇ ರೀತಿಯಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬನ್ನು ಧಾರ್ಮಿಕ ಭಾವನೆಯೊಂದಿಗೆ ಧರಿಸುತ್ತಾರೆ. ಕುಂದಾಪುರ, ಉಡುಪಿ ಕಾಲೇಜುಗಳಲ್ಲಿ ಹಿಂದೂ ಬಾಂಧವ ವಿದ್ಯಾರ್ಥಿನಿಯರು ತಿಲಕ ಅಥವಾ ಹಣೆಬೊಟ್ಟು ಹಾಕಿ ಬರುತ್ತಾರೆ. ಬಳೆ ತೊಟ್ಟಿರುತ್ತಾರೆ. ಹುಡುಗರು ರಾಕಿ ಅಥವಾ ಕೈನೂಲು, ಕಡಗ ಕಟ್ಟಿಕೊಂಡೇ ಬರುತ್ತಾರೆ.

ಆಷ್ಟೇ  ಅಲ್ಲದೆ ಅಲ್ಲಿ ಸರಸ್ವತಿ ಪೂಜೆ ಮಾಡ್ತಾರೆ, ಭಕ್ತಿ ಗೀತೆಗಳನ್ನು ಹಾಡುತ್ತಾರೆ. ಇಷ್ಟೆಲ್ಲ ಇದ್ದೂ ಹಿಜಾಬ್ ಹೇಗೆ ಒಮ್ಮಿಂದೊಮ್ಮೆಲೆ ಕಾಲೇಜಿನಲ್ಲಿ ತೊಡಕಾಯಿತು? ಕುಂದಾಪುರ ಕಾಲೇಜಿನಲ್ಲಿ ಬಹಳ ಹಿಂದಿನ ವರ್ಷಗಳಿಂದಲೇ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಬರುತ್ತಿದ್ದರು.

ಈಗ ಏಕಾಏಕಿ ಅಲ್ಲಿ ಹಿಜಾಬ್‌ಧಾರಿಣಿಗೆ ಕಾಲೇಜಿನಲ್ಲಿ ಪ್ರವೇಶವಿಲ್ಲ ಎಂದರೆ ಅದರ ಹಿಂದಿನ ಉದ್ದೇಶವಂತೂ ಸ್ಪಷ್ಟವಾಗುತ್ತದೆ.

ಇದು ಬಿಜೆಪಿಯ ರಾಜಕೀಯ ಷಡ್ಯಂತ್ರ. ಇದು ಆರೆಸ್ಸೆಸ್‌ನ ದ್ವೇಷ- ಹಿಂಸೆಯ ಸಿದ್ಧಾಂತದ ಮೂರ್ತರೂಪವಾಗಿ ವಿದ್ಯಾರ್ಥಿಗಳನ್ನು ದಾಳಗಳಾಗಿ ಬಳಸುವ ಅಭಿಯಾನ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ದಯನೀಯ ವೈಫಲ್ಯವನ್ನು ಕಂಡಿರುವ ಸಂದರ್ಭದಲ್ಲಿ ಜನತೆಯ ಚಿಂತನೆಯನ್ನು ಹಳಿ ತಪ್ಪಿಸುವ ಹುನ್ನಾರದ ಭಾಗವಾಗಿ ಈ ಹಿಜಾಬ್ ನಿಷೇಧ.

ನಿರುದ್ಯೋಗ, ಬೆಲೆ ಏರಿಕೆ, ಮಂತ್ರಿಗಳ ನಡುವಿನ ಕಚ್ಚಾಟ, ೪೦ ಶೇಕಡಾ ಕಮಿಷನ್ ದಂಧೆ, ಸಾಲದ್ದಕ್ಕೆ ಅರೆಕಾಲಿಕ ಶಿಕ್ಷಕರು ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳು, ಕಲ್ಯಾಣ ಕರ್ನಾಟಕ ಕಡೆಗಣನೆ, ಬೆಳಗಾವಿಯ ಮರಾಠಿಗಳ ಕಿರುಕುಳ, ಕನ್ನಡ ಭಾಷೆಯ ಅವಗಣನೆಯಿಂದ ಕುಖ್ಯಾತಿ ಪಡೆದ ಬಿಜೆಪಿ ಸರಕಾರಕ್ಕೆ 2023ರಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಗೆ ಬೇಕಾಗಿರುವ ಮತಗಳನ್ನು ಪಡೆಯುವ ರಾಜಕೀಯವೇ ಹಿಜಾಬ್ ನಿಷೇಧ.

ವಿವಿಧ ಭಾಷೆ, ಸಂಸ್ಕೃತಿ, ಧರ್ಮಗಳನ್ನು ಒಳಗೊಂಡ ಭಾರತೀಯ ಸಮಾಜದಲ್ಲಿ ನಿರ್ದಿಷ್ಟ ಸಂಸ್ಕೃತಿಯನ್ನು ಹೇರಲು ಸಾಧ್ಯವಿಲ್ಲ. ಕ್ಯಾಂಪಸ್ಸಿನೊಳಗೆ ಬರುವ ವಿದ್ಯಾರ್ಥಿಗಳು ವಿವಿಧ ಸಂಸ್ಕೃತಿ, ಸಂಪ್ರದಾಯಗಳ ಹಿನ್ನೆಲೆಯಿಂದ ಬಂದವರು. ಸಿಖ್ ಸಮುದಾಯದ ವಿದ್ಯಾರ್ಥಿಗಳು ಪೇಟಾ ತೊಡಲೇಬೇಕು. ಅದು ಅವರ ಧಾರ್ಮಿಕ ನಂಬುಗೆಯ ಅವಿಭಾಜ್ಯ ಆಚಾರ. ಇನ್ನೂ ಕೆಲವು ವರ್ಗಗಳು ಉದ್ದನಾಮ, ಅಡ್ಡನಾಮ, ಮೂರು ನಾಮ, ರಕ್ಷಾಬಂಧನ, ಕೈನೂಲು, ಕೈಕಡಗ ಧರಿಸುವುದು ಕಾಲೇಜುಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಾಣಸಿಗುವುದು.

ಎಲ್ಲಾ ಹೆಣ್ಣುಮಕ್ಕಳು ಕಾಲೇಜುಗಳಲ್ಲಿ ದುಪ್ಪಟ್ಟಾ ಹಾಕಿಕೊಂಡು ಬರುತ್ತಾರೆ. ಇದೂ ಒಂದು ರೀತಿಯಲ್ಲಿ ಮೈ ಮುಚ್ಚುವ ಒಂದು ರೀತಿಯೇ ಆಗಿದೆ. ಅದನ್ನೇ ತಲೆವರೆಗೂ ಮುಚ್ಚುವ ಮುಸ್ಲಿಮ್ ಹೆಣ್ಮಕ್ಕಳಿಂದ ಕಾಲೇಜಿನ ಶಿಸ್ತಿಗೋ ವಿದ್ಯಾರ್ಜನೆಗೋ ಯಾವ ತೊಡಕೂ ಆಗದು. ಹಿಜಾಬ್‌ನಿಂದ ವಿದ್ಯಾರ್ಥಿಗಳ ನಡುವೆ ಧಾರ್ಮಿಕ ತಾರತಮ್ಯ ಹೇಗೆ ಉಂಟಾಗುತ್ತದೆ ಅನ್ನುವುದಕ್ಕೆ ಶಿಕ್ಷಕರಿಂದಾಗಲೀ, ವಿದ್ಯಾರ್ಥಿಗಳಿಂದಾಗಲೀ ಯಾವ ಉತ್ತರವೂ ಸಿಗದು. ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರ ಹೆಸರಿನಿಂದಲೇ ತಿಳಿಯಬಹುದು ಅವರು ಯಾವ ಧಾರ್ಮಿಕ ಅನುಯಾಯಿಗಳೆಂದು. ಇನ್ನೂ ಹೆಚ್ಚಿನವರ ಹೆಸರಲ್ಲಿ ಜಾತಿ ಸೂಚಕ ನಾಮಗಳೂ ಸೇರಿರುತ್ತವೆ. ಅದರಿಂದ ಇನ್ನೂ ಹೆಚ್ಚಾಗಿ ಅವರು ಯಾವ ಜಾತಿ-ವರ್ಣಕ್ಕೆ ಸೇರಿದವರೆಂದೂ ತಿಳಿಯುತ್ತದೆ. ಈ ಎಲ್ಲಾ ಸನ್ನಿವೇಶಗಳ ನಡುವೆ ಹಿಜಾಬ್ ನಿಷೇಧ ವಿಧಿಸಿರುವುದು ಆರೆಸ್ಸೆಸ್‌ನ ಕೊಮುವಾದಿ – ದ್ವೇಷಮಯ ಅಜೆಂಡಾದ ಭಾಗವಲ್ಲದೆ ಇನ್ನೇನೂ ಅಲ್ಲ.

ಕಾಲೇಜು ಶಿಕ್ಷಣ ವಲಯಗಳಲ್ಲಿ ಯೂನಿಫಾರಂ ಧರಿಸಬೇಕೆಂಬ ಸರಕಾರಿ ಶೈಕ್ಷಣಿಕ ನಿಲುವಾಗಲೀ ನೀತಿಯಾಗಲೀ ಈವರೆಗೆ ಬೆಳಕಿಗೆ ಬಂದಿಲ್ಲ. ಕಾಲೇಜು ಅಂದರೆ ಶಿಕ್ಷಣಗಳಿಸುವ ಮುಕ್ತ ತಾಣ. ಅವರವರ ಅಭಿರುಚಿ, ಆಸಕ್ತಿ, ಸಂಸ್ಕೃತಿ, ಅನುಕೂಲತೆಗೆ ಅನುಗುಣವಾಗಿ ವಿದ್ಯಾರ್ಥಿ – ವಿದ್ಯಾರ್ಥಿನಿಯರು ವಸ್ತ್ರಧಾರಣೆ ಮಾಡಬಹುದು. ಇದು ನಮ್ಮ ಸಂವಿಧಾನದಲ್ಲಿ ಖಾತರಿ ಪಡಿಸಿದ ಸ್ವಾತಂತ್ರ್ಯವೂ ಹೌದು. ಕ್ಯಾಂಪಸ್ಸಿನೊಳಗೆ ಭಜರಂಗಿಗಲು, ಸಂಘಿಗಳು ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲು, ಬೆದರಿಸಲು, ದಾಂಧಲೆ ನಡೆಸಲು ಬಿಡುವ ಕಾಲೇಜು ಆಡಳಿತ ಹಾಗೂ ಶಿಕ್ಷಕ ವರ್ಗ ಯಾವ ಗಂಭೀರ ಅಪರಾಧ ಎಸಗುತ್ತಿದ್ದಾರೆ ಎನ್ನುವುದೂ ಅವರಿಗೆ ತಿಳಿದಿದೆ ಎನ್ನುವುದು ಅವರ ಮಾತುಗಳಿಂದಲೇ ವ್ಯಕ್ತವಾಗುತ್ತಿದೆ.

ಜನಪ್ರತಿನಿಧಿಯಾಗಿ ಸಂವಿಧಾನ ಬದ್ಧವಾಗಿ ಹಾಗೂ ನ್ಯಾಯ ಪರವಾಗಿ ನಿಲ್ಲಬೇಕಾದ ಶಾಸಕರು ಸಂಸದರುಗಳು ಕೂಡಾ ಹಿಜಾಬ್ ವಿರುದ್ಧವಾಗಿ ಬಾಯಿಗೆ ಬಂದಂತೆ ಮಾತಾಡಿ ಸಂಘಿಗಳಿಗೆ ಸಾತ್ ನೀಡುತ್ತಿರುವುದು ಘೋರ ಅಪರಾಧ. ಇಂತಹವರು ಚುನಾವಣೆಯಲ್ಲಿ ಗೆದ್ದು ಜನಪ್ರತಿನಿಧಿಗಳೆಂಬ ಹಣೆಪಟ್ಟಿ ಹೊತ್ತಿರುವುದು ನಮ್ಮ ರಾಜ್ಯಕ್ಕೆ ಅವಮಾನ. ಮಂಗಳೂರು ಸಂಸದ ನ.ಕು.ಕಟೀಲ್, ಮೈಸೂರು ಸಂಸದ ಪ್ರತಾಪ ಸಿಂಹ, ಶಾಸಕ ಸುನೀಲ್ ಕುಮಾರ್ ಮುಂತಾದವರು ಉಗ್ರ ಮತಾಂಧತೆಯ ಮಾತನಾಡುತ್ತಿದ್ದಾರೆ. ಇಂತಹವರಿಂದಲೇ ಸಮಾಜದ್ರೋಹಿ ಕೆಲಸ ಎಸಗುತ್ತಿರುವ ಸಂಘಿಗಳಿಗೆ ಪ್ರೇರಣೆ ಸಿಗುತ್ತಿರುವುದು.

ಹಿಜಾಬ್ ಮುಸ್ಲಿಮ್ ಮಹಿಳೆಯ ಧಾರ್ಮಿಕ ಘನತೆಯ ಸಂಕೇತ. ಹಿಜಾಬ್ ಧರ್ಮ ಜಾತಿಯ ಹೊರತಾಗಿಯೂ ಎಲ್ಲಾ ಮಹಿಳೆಯರ ಘನತೆ – ಗೌರವದ ಸಂಕೇತವೂ ಹೌದು. ರಾಜಸ್ತಾನ – ಗುಜರಾತ್, ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳ ಹಿಂದೂ ಮಹಿಳೆಯರೂ ತಲೆ ಸೆರಗನ್ನು ಮುಖದ ಭಾಗದವರೆಗೆ ಹಾಕುತ್ತಿರುವುದನ್ನೂ ಕಣ್ಣಾರೆ ನೋಡುತ್ತೇವೆ. ಕ್ರೈಸ್ತ ಭಗಿನಿಯರೂ ತಲೆವಸ್ತ್ರವನ್ನೂ ಧಾರ್ಮಿಕ ಆಚರಣೆಯಾಗಿ ಸಾರ್ವಜನಿಕವಾಗಿ ಧರಿಸುತ್ತಾರೆ. ಭಾರತೀಯ ಕುಟುಂಬದಲ್ಲಿ ಪ್ರತಿ ಮಹಿಳೆಯರೂ ಹಿರಿಯರ ಮುಂದೆ ಹಾಗೂ ಪರಪುರುಷರ ಮುಂದೆ ತಲೆಸೆರಗನ್ನು ಹಾಕುವುದನ್ನು ಕಾಣುತ್ತೇವೆ. ಅಂದ ಮೇಲೆ ‘ಹಿಜಾಬ್’ ನಿಷೇಧ ಎಂಬುದು ಸರ್ವ ಧರ್ಮ ಮಹಿಳೆಯರ ಮೇಲೆ ನಡೆದ ಆಕ್ರಮಣ ಹಾಗೂ ಅವಮಾನ. ಅದನ್ನೂ ಒಗ್ಗಟ್ಟಿನಿಂದ ಖಂಡಿಸಿ ಮಹಿಳೆಯರ ಘನತೆಯನ್ನೂ ಎತ್ತಿ ಹಿಡಿಯೋಣ.

Join Whatsapp
Exit mobile version