ಎರ್ನಾಕುಳಂ/ ಕೇರಳ: ತಲಾಖ್ ಹೇಳಿ ವೈವಾಹಿಕ ಸಂಬಂಧ ಮುರಿದ ವಿಚಾರವಾಗಿ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ.
ಕೊಟ್ಟಾರಕ್ಕರದ ಯುವಕನೊಬ್ಬನ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯುವಕ ತಲಾಕ್ ಹೇಳಿ ಮದುವೆ ಸಂಬಂಧ ಮುರಿದ ಮತ್ತು ಎರಡನೇ ಮದುವೆಯಾದುದಕ್ಕೆ ತಡೆ ನೀಡಿ ತೀರ್ಪು ಹೊರಡಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ವೈಯಕ್ತಿಕ ಕಾನೂನಿನನ್ವಯ ನೀಡಲಾದ ತಲಾಖ್ ಅನ್ನು ರದ್ದು ಪಡಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು. ಜನರ ಇಂತಹ ಧಾರ್ಮಿಕ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ನ್ಯಾಯಾಲಯಕ್ಕೆ ಅಧಿಕಾರವಿಲ್ಲ ಎಂದು ಜಸ್ಟೀಸ್ ಎ ಮುಹಮ್ಮದ್ ಮುಷ್ತಾಕ್, ಸೋಫಿ ಥಾಮಸ್ ಎಂಬವರನ್ನೊಳಗೊಂಡ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಮೈನಾಗಪ್ಪಳಿ ನಿವಾಸಿ ಯುವತಿಯೋರ್ವಳ ಅರ್ಜಿಯ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ಆಕೆಯ ಗಂಡನ ತಲಾಖ್ ಮತ್ತು ಎರಡನೇ ವಿವಾಹ ರದ್ದುಪಡಿಸಿ ಆದೇಶ ನೀಡಿತ್ತು.
ಮದುವೆಯ ಪ್ರಾಯವಾಗದಿದ್ದರೂ ಋತುಮತಿಯಾದ ಮುಸ್ಲಿಂ ಹೆಣ್ಮಕ್ಕಳು ಪೋಷಕರ ಅನುಮತಿ ಇಲ್ಲದೆಯೇ ಮದುವೆಯಾಗಬಹುದೆಂದು ಕೆಲ ದಿನಗಳ ಹಿಂದೆಯಷ್ಟೇ ದೆಹಲಿ ಹೈಕೋರ್ಟ್ ಹೇಳಿತ್ತು.