Home ರಾಷ್ಟ್ರೀಯ ‘ರಾಷ್ಟ್ರೀಯ ಶಿಕ್ಷಕ-2022’ ಪ್ರಶಸ್ತಿಗೆ ಚಿತ್ರದುರ್ಗದ ಟಿ.ಪಿ. ಉಮೇಶ್ ಆಯ್ಕೆ

‘ರಾಷ್ಟ್ರೀಯ ಶಿಕ್ಷಕ-2022’ ಪ್ರಶಸ್ತಿಗೆ ಚಿತ್ರದುರ್ಗದ ಟಿ.ಪಿ. ಉಮೇಶ್ ಆಯ್ಕೆ

ಬೆಂಗಳೂರು: ಶಾಲೆಯ ಸಮಗ್ರ ಅಭಿವೃದ್ಧಿಗೆ ನೀಡಿದ ಗಣನೀಯ ಸೇವೆಗಾಗಿ ‘ರಾಷ್ಟ್ರೀಯ ಶಿಕ್ಷಕ-2022’ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಅಮೃತಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಟಿ.ಪಿ. ಉಮೇಶ್ ಭಾಜನರಾಗಿದ್ದಾರೆ.

ಸರ್ಕಾರಿ ಶಾಲೆಯಲ್ಲಿ ಪ್ರಯೋಗಾಲಯ, ಗ್ರಂಥಾಲಯ, ಡಿಜಿಟಲ್ ಕ್ಲಾಸ್ ಸ್ಥಾಪನೆ ಸೇರಿದಂತೆ ಶಾಲೆಯ ಸಮಗ್ರ ಅಭಿವೃದ್ಧಿಗೆ ಅವರು ಶ್ರಮಿಸಿದ್ದಾರೆ.

ಉಮೇಶ್ ಅವರು ಕೋವಿಡ್ ಸಂದರ್ಭದಲ್ಲಿ ಅಮೃತಾಪುರ ಗ್ರಾಮದಲ್ಲಿಯೇ ಉಳಿದು ಮಕ್ಕಳಿಗೆ ಹಗಲಿರುಳೆನ್ನದೆ ಜಗಲಿ ಪಾಠ, ವಾಟ್ಸಪ್ ಮೂಲಕ ಹಾಗೂ ಮೊಬೈಲ್ ಕರೆ ಮೂಲಕ ನಿರಂತರ ಕಲಿಕಾ ಮಾರ್ಗದರ್ಶನ ಪಾಠ ಕೈಗೊಂಡಿದ್ದರು. ಅಲ್ಲದೇ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ, ಪ್ರತ್ಯೇಕ ಪಾಠೋಪಕರಣಗಳ ಕೊಠಡಿ, ವ್ಯವಸ್ಥಿತ ಗ್ರಂಥಾಲಯ ಮತ್ತು ಕಂಪ್ಯೂಟರ್ ಕೊಠಡಿಯನ್ನು ಸ್ವಂತ ಶ್ರಮದಿಂದ ಮಕ್ಕಳ ಕಲಿಕೆಗಾಗಿ ಸಜ್ಜುಗೊಳಿಸಿದ್ದರು.

ಸಾಹಿತ್ಯಿಕ ಚಟುವಟಿಕೆಯಲ್ಲಿ ನನ್ನಯ ಸೈಕಲ್ ಟ್ರಿಣ್ ಟ್ರಿಣ್ ಟ್ರಿಣ್, ವಚನಾಂಜಲಿ, ಫೋಟೋಕ್ಕೊಂದು ಫ್ರೇಮು, ಅಪ್ಪನು ಕೊಡಿಸಿದ ಮೊದಲ ಪುಸ್ತಕ, ವಚನ ವಾಣಿ, ದೇವರಿಗೆ ಬೀಗ ಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.

Join Whatsapp
Exit mobile version