ಚನ್ನಪಟ್ಟಣ: ಮನುಷ್ಯತ್ವ ಇರುವ ಭಾವನಾತ್ಮಕ ಜೀವಿಗಳಿಗೆ ಮಾತ್ರ ಕಣ್ಣೀರು ಬರೋದು. ಕಟುಕರಿಗೆ ಕಣ್ಣೀರು ಬರುವುದಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎನ್‌ಡಿಎ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ವಿರುಪಾಕ್ಷಿಪುರ ಗ್ರಾಮದಲ್ಲಿ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಕಣ್ಣೀರಿನ ಬಗ್ಗೆ ವಿರೋಧಿಗಳು ವ್ಯಂಗ್ಯ ಮಾಡುತ್ತಾರೆ. ನಾನು ಸಾಕಷ್ಟು ಸಲ ಸಹಿಸಿಕೊಂಡಿದ್ದೇನೆ ಎಂದು ಕೈ ಮುಗಿದು ಭಾವುಕರಾದರು.
ನನ್ನನ್ನು ಅಭಿಮನ್ಯು ಪಾತ್ರವನ್ನಾಗಿ ಮಾಡಿದ್ದಾರೆ. ಆತನಿಗೆ ಹಣೆಬರಹ, ಅದೃಷ್ಟ ಇಲ್ಲ ಅಂತಾರೆ. ನನ್ನ ಹಣೆಬರಹ ಬರೆಯುವವರು ಈ ಕ್ಷೇತ್ರದ ಜನರು. ನಾನು ಮಂಡ್ಯದಲ್ಲಿ ಸೋತಿದ್ದೇನೆ. ಆ ಜಿಲ್ಲೆಯ ಜನ ನನಗೆ ಹೆಚ್ಚಿನ ಮತ ಕೊಟ್ಟು ಆಶೀರ್ವದಿಸಿದ್ದಾರೆ. ಈ ಕ್ಷೇತ್ರದ ಜನರು ನನ್ನ ಕೈ ಬಿಡಲ್ಲ ಎಂಬ ವಿಶ್ವಾಸವಿದೆ ಎಂದರು.
40 ವರ್ಷದಿಂದ ನೀವು ನಮ್ಮ ಕುಟುಂಬವನ್ನ ಬೆಳೆಸಿದ್ದೀರಿ. ನಿರುದ್ಯೋಗ ಸಮಸ್ಯೆ ನಿವಾರಿಸಲು ಕುಮಾರಣ್ಣನ ನೇತೃತ್ವದಲ್ಲಿ ಮಂಡ್ಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. 158 ಕಂಪನಿ ಕರೆತಂದು 1200 ಜನಕ್ಕೆ ಉದ್ಯೋಗ ಕೊಡಿಸಿದರು. ಚನ್ನಪಟ್ಟಣ ಕ್ಷೇತ್ರಕ್ಕೆ ಒಂದೂವರೆ ಸಾವಿರ ಕೋಟಿಯಷ್ಟು ಅನುದಾನ ತಂದಿದ್ದು ಕುಮಾರಣ್ಣ ಅವರು, ಕುಮಾರಣ್ಣ ಏನು ಮಾಡಿದರು ಅಂತ ವಿರೋಧಿಗಳು ಕೇಳ್ತಾರೆ. ಪ್ರತಿ ಹಳ್ಳಿಗಳಲ್ಲಿ ಸಿಸಿ ರಸ್ತೆ, ಏಷ್ಯಾದ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ನಿರ್ಮಿಸಿದ್ದಾರೆ. ಮಾವು ಶೇಖರಣ ಘಟಕ ಮಾಡ್ತಿದ್ದಾರೆ. 107 ಕೆರೆ ತುಂಬಿಸಿದ್ದೇವೆ. ಎಲ್ಲದಕ್ಕೂ ದಾಖಲೆಗಳಿವೆ ಎಂದು ನಿಖಿಲ್ ಹೇಳಿದರು. ಮಾಜಿ ಪ್ರಧಾನಿ ದೇವೇಗೌಡ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಗೋಪಾಲಯ್ಯ, ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಎ.ಮಂಜುನಾಥ್, ಕೆ.ಟಿ.ಶ್ರೀಕಂಠೇಗೌಡ, ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.