ಚೆನ್ನೈ: ಪ್ರವಾಸಕ್ಕೆ ತೆರಳಿದ್ದ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ಆಕಸ್ಮಿಕವಾಗಿ ಪ್ರವಾಹದಲ್ಲಿ ಸಿಲುಕಿದ್ದು, ಅರಣ್ಯ ಸಿಬ್ಬಂದಿ ಸಾಹಸಮಯವಾಗಿ ರಕ್ಷಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಆನೈವಾರಿ ಜಲಪಾತದ ಬಳಿ ಸಿಲುಕಿದ್ದ ಮಹಿಳೆ ಮತ್ತು ಮಗುವನ್ನು ಸಾಹಸಮಯವಾಗಿ ರಕ್ಷಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಅಭಿನಂದಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಜೀವ ಉಳಿಸಿದವರನ್ನು ಸರ್ಕಾರದ ವತಿಯಿಂದ ಗೌರವಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಬದಿಯಲ್ಲಿ ಇರುವ ಜನರು, “ಮೇಲೆ ಹತ್ತಬೇಡಿ ಬೀಳಬಹುದು, ಅಲ್ಲೇ ನಿಲ್ಲಿ” ಎಂದು ಕಿರುಚಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಅದಾಗ್ಯೂ ಹಗ್ಗವನ್ನು ಬಳಸಿ ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ.
ರಕ್ಷಣಾ ಕಾರ್ಯಾಚರಣೆಯ ವೇಳೆ ನಿಯಂತ್ರಣ ತಪ್ಪಿ ನೀರಿಗೆ ಬಿದ್ದ ಸಿಬ್ಬಂದಿಗಳು ಯಾವುದೆ ಅಪಾಯವಿಲ್ಲದೆ ದಡ ತಲುಪಿದ್ದಾರೆ ಎಂದು ವರದಿಯಾಗಿದೆ.