ಬೆಂಗಳೂರು: ‘ದ್ವೇಷ ಭಾಷಣ ಮಾಡಿದ ಆರೋಪದಡಿ ವಿಶ್ವಹಿಂದೂ ಪರಿಷತ್ ನಾಯಕ ಶರಣ್ ಪಂಪ್ವೆಲ್ ಬಂಧಿಸಬಾರದು ಮತ್ತು ಹೈಕೋರ್ಟ್ ಅನುಮತಿ ನೀಡದ ಹೊರತು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬಾರದು’ ಎಂದು ಹೈಕೋರ್ಟ್ ಆದೇಶಿಸಿದೆ.
‘ನನ್ನ ವಿರುದ್ಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಶರಣ್ ಪಂಪ್ವೆಲ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಸುಯೋಗ ಹೇರಳೆ ಅವರ ವಾದ ಆಲಿಸಿದ ನ್ಯಾಯಪೀಠ, ‘ಶರಣ್ ಪಂಪ್ವೆಲ್ ಅವರನ್ನು ಪೊಲೀಸರು ಬಂಧಿಸಬಾರದು. ಅವರ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಾರದು ಮತ್ತು ಈ ನ್ಯಾಯಪೀಠದ ಅನುಮತಿ ಇಲ್ಲದೆ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಬಾರದು. ಶರಣ್ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಬೇಕು’ ಎಂದು ಆದೇಶಿಸಿತು. ಪ್ರತಿವಾದಿ ಉಡುಪಿ ಪೊಲೀಸ್ ಠಾಣೆ ಅಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.
