ಹಾಸನ: ಮುನಿಸಿಪಲ್ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವಂತೆ ಒತ್ತಾಯಿಸಿ ಸಫಾಯಿ ಕರ್ಮಚಾರಿ / ಪೌರಕಾರ್ಮಿಕರ ಸಂಘಟನೆಗಳ ಜಂಟಿ ಹೋರಾಟ ಸಮಿತಿಯ ಆಶ್ರಯದಲ್ಲಿ ರಾಜ್ಯಾದ್ಯಂತ ಪೌರಕಾರ್ಮಿಕರು ಆರಂಭಿಸಿರುವ ಅನಿರ್ದಿಷ್ಟ ಮುಷ್ಕರ ಎರಡನೇ ದಿನವೂ ಮುಂದುವರಿದಿದ್ದು, ಇಂದು ಕಾರ್ಮಿಕರು ವಿಷ ಸೇವನೆ ಮಾಡಲು ಮಾಡಿದ ಯತ್ನವನ್ನು ಸಂಘಟನೆ ಮುಖಂಡರು ಮತ್ತು ಪೊಲೀಸರು ತಡೆದರು.
ರಾಜ್ಯದ ಎಲ್ಲಾ ನೇರ ಪಾವತಿ, ಗುತ್ತಿಗೆ ಪೌರಕಾರ್ಮಿಕರು, ದಿನಗೂಲಿ ಲೋಡರ್ಸ್, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ, ಪಾರ್ಕ್, ಸ್ಮಶಾನ, ಘನ ತ್ಯಾಜ್ಯ ಘಟಕ, ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು, ನೀರು ಸರಬರಾಜು ನೌಕರರನ್ನು ಒಂದೇ ಬಾರಿಗೆ ಕಾಯಂಗೊಳಿಸಲು ಒತ್ತಾಯಿಸಿ ಜುಲೈ 1, 2022ರಿಂದ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸ್ವಚ್ಛತಾಕಾರ್ಯ ಸ್ಥಗಿತಮಾಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಯುತ್ತಿದೆ.
ಪೌರಕಾರ್ಮಿಕರ ಬೇಡಿಕೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಘಟನೆ ಮುಖಂಡರ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದರೂ ಪರಿಹಾರ ಸಿಕ್ಕಿಲ್ಲ. ಶುಕ್ರವಾರದ ಮಾತುಕತೆಯಲ್ಲಿ ಪೌರಕಾರ್ಮಿಕರ ಬೇಡಿಕೆ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಬೇಡಿಕೆಗಳ ಈಡೇರಿಕೆ ಸಂಬಂಧ ಕರಡು ತಯಾರಿಸಿ ಶನಿವಾರ ಸಭೆಯಲ್ಲಿ ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸಂಘಟನೆ ಮುಖಂಡರಿಗೆ ಸಿಎಂ ನೀಡಿದ್ದ ಭರವಸೆಗೆ ವ್ಯತಿರಿಕ್ತವಾಗಿ ಅಧಿಕಾರಿಗಳು ಕರಡು ತಯಾರಿಸಿದ್ದ ಹಿನ್ನೆಲೆಯಲ್ಲಿ ಸಂಘಟನೆ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಈ ಮಧ್ಯೆ ಸಿಎಂ ಹೈದರಾಬಾದ್ನಂಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಗೆ ಹೋಗಿದದು, ಸೋಮವಾರ ಹಿಂತಿರುಗುವವರಿದ್ದಾರೆ. ಹಾಗಾಗಿ ಸಿಎಂ ರಾಜ್ಯಕ್ಕೆ ಆಗಮಿಸಿ ಪೌರ ಕಾರ್ಮಿಕರ ಬಗ್ಗೆ ಒಂದು ಸ್ಪಷ್ಟ ತೀರ್ಮಾನ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರಿಸಲು ಪೌರ ಕಾರ್ಮಿಕರ ಸಂಘಟನೆಗಳು ತೀರ್ಮಾನಿಸಿವೆ ಎಂದು ಸಿಐಟಿಯು ನೇತೃತ್ವದ ಪೌರ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ತಿಳಿಸಿದರು.
ಪೌರ ಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಆರ್.ಮೋಹನ್ ಭೇಟಿ ನೀಡಿ ಕಾರ್ಮಿಕರ ಅಹವಾಲು ಆಲಿಸಿದರು. ಗುತ್ತಿಗೆ ಕಾರ್ಮಿಕರ ಬಗ್ಗೆ ಸರ್ಕಾರದ ನಿರ್ಧಾರಕ್ಕೆ ಬದ್ಧವಾಗಿದ್ದು, ಗುತ್ತಿಗೆ ನೌಕರರಿಗೆ ಸಂಬಳ ನೀಡುವ ಹೊಣೆಗಾರಿಕೆ ಗುತ್ತಿಗೆ ಪಡೆದ ಏಜೆನ್ಸಿಯದು. ಅವರಿಗೆ ನಿನ್ನೆಯೇ ಸಂಬಳ ನೀಡುವಂತೆ ಸೂಚನೆ ನೀಡಲಾಗಿದೆ. ನಗರಸಭೆ ಕಡೆಯಿಂದ ಏಜೆನ್ಸಿಯವರಿಗೆ ನೀಡಬೇಕಾದ ಮೊತ್ತವನ್ನು ನೀಡಲಾಗಿದೆ. ಇಂದು ಅಥವಾ ಸೋಮವಾರ ಏಜೆನ್ಸಿಯವರು ಸಂಬಳ ನೀಡುತ್ತಾರೆ. ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಮನವಿ ಮಾಡಿದರು.
ಆದರೆ ಅಧ್ಯಕ್ಷರ ಮನವಿಗೆ ಸ್ಪಂದಿಸದ ಪೌರಕಾರ್ಮಿಕರು ಪ್ರತಿಭಟನೆ ಮುಂದುವರಿಸಿದರು.