Home ಟಾಪ್ ಸುದ್ದಿಗಳು ಪೊಲೀಸರ ನಿರ್ಲಕ್ಷ್ಯ : ನ್ಯಾಯಾಲಯದಲ್ಲೇ ಬಾಂಬ್‌ ಬ್ಲಾಸ್ಟ್‌

ಪೊಲೀಸರ ನಿರ್ಲಕ್ಷ್ಯ : ನ್ಯಾಯಾಲಯದಲ್ಲೇ ಬಾಂಬ್‌ ಬ್ಲಾಸ್ಟ್‌

ಪಾಟ್ನಾ: ಪೊಲೀಸರು ಪಾಟ್ನಾ ನ್ಯಾಯಾಲಯಕ್ಕೆ ಸಾಕ್ಷಿಗೆಂದು ತಂದಿದ್ದ ಬಾಂಬ್‌ ಸ್ಫೋಟಗೊಂಡಿದ್ದು, ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಶುಕ್ರವಾರ ಈ ಘಟನೆ ನಡೆದಿದ್ದು, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಪ್ರಕರಣವೊಂದರ ಆರೋಪಿಗಳಿಂದ ವಶಕ್ಕೆ ಪಡೆದ ಬಾಂಬನ್ನು ಕೋರ್ಟ್‌ಗೆ ಸಾಕ್ಷಿಗಾಗಿ ಪೆಟ್ಟಿಗೆಯಲ್ಲಿ ತಂದಿದ್ದರು.

ಸರ್ಕಾರಿ ವಕೀಲರ ಮುಂದೆ ಇದ್ದ ಟೇಬಲ್‌ ಮೇಲೆ ಬಾಂಬನ್ನು ಇರಿಸಲಾಗಿದ್ದು, ಇದ್ದಕ್ಕಿದ್ದಂತೆ ಬಾಂಬ್‌ ಸ್ಫೋಟಗೊಂಡಿದೆ ಎನ್ನಲಾಗಿದೆ.

ನ್ಯಾಯಾಲಯಕ್ಕೆ ಒಟ್ಟು ಎರಡು ಬಾಂಬ್‌ಗಳನ್ನು ಪೊಲೀಸರು ತಂದಿದ್ದು, ಇನ್ನೊಂದು ಬಾಂಬ್‌ ಸ್ಫೋಟಗೊಳ್ಳುತ್ತದೆ ಎಂಬ ಭಯ ಕಾಡಿದ್ದರಿಂದ ತಕ್ಷಣ ಅಗ್ನಿಶಾಮಕ ದಳ ಮತ್ತು ಬಾಂಬ್‌ ನಿಷ್ಕ್ರಿಯ ದಳ  ಸ್ಥಳಕ್ಕೆ ಕರೆಸಲಾಗಿದೆ. ಆದರೆ ಬಾಂಬನ್ನು ನಿಷ್ಕ್ರಿಯಗೊಳಿಸಲು ಅವರಿಗೂ ಸಾಧ್ಯವಾಗಿಲ್ಲ. ಕೇವಲ ಭಯೋತ್ಪಾದನಾ ನಿಗ್ರಹ ದಳ ಮಾತ್ರ ಈ ಬಾಂಬನ್ನು ನಿಷ್ಕ್ರಿಯಗೊಳಿಸಲು ಸಾಧ್ಯ ಎಂದು ಬಾಂಬ್‌ ಸ್ಕ್ವಾಡ್‌ ತಿಳಿಸಿದ್ದು ಭಯೋತ್ಪಾದನಾ ನಿಗ್ರಹದಳ ಸ್ಥಳಕ್ಕೆ ತಲುಪಲು ಎರಡು ಗಂಟೆ ಸಮಯಾವಕಾಶ ಬೇಕಾಗಿತ್ತು.

ಬಾಂಬ್‌ ನಿಷ್ಕ್ರಿಯಗೊಳಿಸುವವರೆಗೂ ಕೋರ್ಟ್‌ ಆವರಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಂತರ ಆಂಟಿ ಟೆರರಿಸ್ಟ್‌ ಸ್ಕ್ವಾಡ್‌ ಬಾಂಬನ್ನು ನಿಷ್ಕ್ರಿಯಗೊಳಿಸಿದೆ.

ಸಾಮಾನ್ಯವಾಗಿ ಬಾಂಬ್‌ ನಿಷ್ಕ್ರಿಯಗೊಂಡಿದ್ದರೆ ಮಾತ್ರ ಸಾಕ್ಷಿಗಾಗಿ ಕೋರ್ಟ್‌ಗೆ ತರಬೇಗಾತ್ತದೆ. ಆದರೆ ಪೊಲೀಸರು ತಂದಿದ್ದ ಬಾಂಬ್ ಸರಿಯಾಗಿ ನಿಷ್ಕ್ರಿಯಗೊಂಡಿರಲಿಲ್ವಾ ಅಥವಾ  ಜೀವಂತ ಬಾಂಬನ್ನು ಕೋರ್ಟ್‌ಗೆ ಹೇಗೆ ತಂದರು ಎಂಬ ಬಗ್ಗೆ ತನಿಖೆ ಆರಂಭವಾಗಿದೆ.

ಪ್ರಕರಣದಲ್ಲಿ  ಗಾಯಗೊಂಡ ವ್ಯಕ್ತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ಬಾಂಬ್‌ ಏನಾದರೂ ಸ್ಫೋಟಗೊಂಡಿದ್ದರೆ ಇನ್ನಷ್ಟು ಹಾನಿಯಾಗುವ ಸಾಧ್ಯತೆಯಿತ್ತು ಎನ್ನಲಾಗಿದೆ.

Join Whatsapp
Exit mobile version