Home Uncategorized ಹಾಸನ: ನಗರಸಭೆ ಸದಸ್ಯನ ಕೊಲೆ; ಪೊಲೀಸರ ವಜಾಕ್ಕೆ ರೇವಣ್ಣ ಪಟ್ಟು, ಬಿಗಿ ಬಂದೋಬಸ್ತ್

ಹಾಸನ: ನಗರಸಭೆ ಸದಸ್ಯನ ಕೊಲೆ; ಪೊಲೀಸರ ವಜಾಕ್ಕೆ ರೇವಣ್ಣ ಪಟ್ಟು, ಬಿಗಿ ಬಂದೋಬಸ್ತ್

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣದ ಪೂರ್ಣ  ತನಿಖೆಯಾಗುವವರೆಗೂ ನಗರದ ಮೂವರು ಪೊಲೀಸ್ ಅಧಿಕಾರಿಗಳನ್ನು ವಜಾ ಮಾಡಬೇಕು. ಅಲ್ಲಿಯವರೆಗೂ  ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಶಾಸಕ ಎಚ್.ಡಿ.ರೇವಣ್ಣ ಪಟ್ಟುಹಿಡಿದಿದ್ದಾರೆ.

ನಗರದ ಸರ್ಕಲ್ ಇನ್ ಸ್ಪೆಕ್ಟರ್ ರೇಣುಕಾಪ್ರಸಾದ್, ಡಿವೈಎಸ್ಪಿ ಉದಯ ಭಾಸ್ಕರ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಆರೋಗ್ಯಪ್ಪ ಅವರನ್ನು ವಜಾ ಮಾಡಬೇಕು ಎಂದು ರೇವಣ್ಣ ಒತ್ತಾಯಿಸಿದ್ದಾರೆ.

ನಗರದ ಜವೇನಹಳ್ಳಿ ಮಠ ಲಕ್ಷ್ಮಿಪುರ ಬಡಾವಣೆಯಲ್ಲಿ ಪ್ರಶಾಂತ್ ನಾಗರಾಜ್‌ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ ವಿಷಯ ತಿಳಿಯುತ್ತಲೇ ರಾತ್ರಿ ಮನೆ ಬಳಿ ಸಾವಿರಾರು ಜನರು ಜಮಾಯಿಸಿದ್ದರು. ನಗರದ ಸರ್ಕಾರಿ ಆಸ್ಪತ್ರೆ ( ಹಿಮ್ಸ್) ಶವಾಗಾರದಲ್ಲಿ ಮೃತದೇಹವನ್ನು ಇಡಲಾಗಿದೆ. ಆದರೆ, ಪೊಲೀಸ್ ಅಧಿಕಾರಿಗಳ‌ ವಜಾ‌ ಆಗುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್.ಡಿ. ರೇವಣ್ಣ  ಹೇಳಿದ್ದಾರೆ. 

ಪ್ರಶಾಂತ್ ಕೊಲೆ ಹಿನ್ನೆಲೆಯಲ್ಲಿ ಹಾಸನದಲ್ಲಿ ಗುರುವಾರ ಬೆಳಿಗ್ಗೆಯಿಂದ ಮಧ್ಯರಾತ್ರಿ 12ಗಂಟೆವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ.  ಬಾರ್, ಡಾಬಾಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶಿಸಿದ್ದಾರೆ.  

ಜೆಡಿಎಸ್ ಮುಖಂಡ ಪ್ರಶಾಂತ್ ಹತ್ಯೆಯ ಬಳಿಕ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು, ಭದ್ರತೆಗಾಗಿ ನಗರದಲ್ಲಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.  ಮೃತದೇಹ ಇರುವ ಹಿಮ್ಸ್ ಆಸ್ಪತ್ರೆಯ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ  ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಹೊರ ಜಿಲ್ಲೆಯಿಂದಲೂ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.

ಪ್ರಶಾಂತ್ ಅವರು ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದರು. ಈ ಹಿನ್ನೆಲೆ ಪ್ರಶಾಂತ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಹಾಸನಕಟ್ಟಿನಕೆರೆ ಮಾರುಕಟ್ಟೆ ಬಂದ್ ಮಾಡಲಾಗಿದೆ.

Join Whatsapp
Exit mobile version