ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ಹೊರವಲಯದ ಕ್ಲಾರ್ಕ್ ಎಕ್ಸಾಟಿಕದಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ಕಾಂಗ್ರೆಸ್ “ರಾಜ್ಯ ಚಿಂತನ ಶಿಬಿರ”ದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಚಿಂತನ ಶಿಬಿರದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಡಲಿವೆ ಎಂಬ ವಿಶ್ವಾಸ ನನಗಿದೆ. ಈ ಸಭೆಯಲ್ಲಿ ಆರ್ಥಿಕತೆ, ಬೆಲೆ ಏರಿಕೆ, ಸಾಮಾಜಿಕ ನ್ಯಾಯ, ಪಕ್ಷದ ಸಂಘಟನೆ, ಕೃಷಿ ಹಾಗೂ ರೈತರು, ಯುವಕರು, ಮಹಿಳೆಯರು, ಶಿಕ್ಷಣ ಹಾಗೂ ಉದ್ಯೋಗ, ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆಸಲು ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲ ಸಮಿತಿಗಳು ಚರ್ಚೆ ನಡೆಸಿದ ನಂತರ ಸಭೆಯ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಈ ನಿರ್ಣಯಗಳು ನಮ್ಮನ್ನು ನಾವು ಪುನರ್ ಸಂಘಟಿಸಿಕೊಳ್ಳಲು ಒಂದು ದಾರಿ ದೀಪವಾಗಲಿದೆ.ನವ ಸಂಕಲ್ಪ ಶಿಬಿರ ಮುಂದಿನ ದಿನಗಳಲ್ಲಿ ಎದುರಾಗಲಿರುವ ಚುನಾವಣೆಗಳನ್ನು ಎದುರಿಸಲು ಸೈದ್ಧಾಂತಿಕ, ರಾಜಕೀಯ ಹಾಗೂ ಸಂಘಟನಾತ್ಮಕ ವಿಚಾರವಾಗಿ ಅನೇಕ ಅವಕಾಶ ದಾರಿಗಳನ್ನು ನಮಗೆ ನೀಡಲಿದೆ ಎಂದರು.
ಯಾವುದೇ ಪಕ್ಷದ ಶಕ್ತಿ ಎಂದರೆ ಆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಾಗಿದ್ದಾರೆ. ಕೇವಲ ಕೆಲವು ನಾಯಕರೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಹೀಗಾಗಿ ಪಕ್ಷದಲ್ಲಿ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಯಲ್ಲಿನ ಎಲ್ಲ ಹುದ್ದೆಗಳನ್ನು ಮುಂದಿನ 90-180 ದಿನಗಳಲ್ಲಿ ಭರ್ತಿ ಮಾಡುವುದಾಗಿದೆ. ಮುಂದಿನ 15 ದಿನಗಳಲ್ಲಿ ಕೆಪಿಸಿಸಿಯ ಪದಾಧಿಕಾರಿಗಳ ಪಟ್ಟಿಯನ್ನು ಪೂರ್ಣಗೊಳಿಸಬೇಕು ಎಂಬ ವಿಚಾರವಾಗಿ ಪಿಸಿಸಿ ಅಧ್ಯಕ್ಷರ ಜತೆ ಚರ್ಚೆ ಮಾಡಿದ್ದೇನೆ. ನಂತರ ಜಿಲ್ಲಾ ಹಾಗೂ ಬ್ಲಾಕ್ ಹಾಗೂ ಇತರೆ ಘಟಕಗಳಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕೆಪಿಸಿಸಿ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ಕ್ಷೇತ್ರಗಳ ಉಸ್ತುವಾರಿ ನೀಡಲಾಗುವುದು. ಈ ಎಲ್ಲ ವಿಚಾರವಾಗಿ ನಾನು ಚರ್ಚೆ ಮಾಡಿ, ಮೇಲ್ವಿಚಾರಣೆ ಮಾಡುತ್ತೇನೆ.ಎಲ್ಲ ಘಟಕಗಳ ಮುಖ್ಯಸ್ಥರು ಇಲ್ಲಿದ್ದು, ಅವರು ಕೂಡ ತಮ್ಮ ಪದಾಧಿಕಾರಿಗಳ ಹುದ್ದೆಯನ್ನು ಪೂರ್ಣಗೊಳಿಸಬೇಕು. ಇದಕ್ಕಾಗಿ ಪ್ರತ್ಯೇಕ ಸಭೆ ನಡೆಸಲಾಗುವುದು. ಬ್ಲಾಕ್ ಹಾಗೂ ಗ್ರಾಮ ಸಮಿತಿ ನಡುವೆ ಮಂಡಲ ಸಮಿತಿ ಇರಬೇಕು. ನೀವೆಲ್ಲರೂ ಜಿಲ್ಲಾ ಕಚೇರಿಯಲ್ಲಿ ಸಭೆ ಮಾಡಿ ಈ ಸಮಿತಿಯ ವ್ಯಾಪ್ತಿ ನಿರ್ಧರಿಸಬೇಕು. ನಂತರ ವಾರ್ಡ್ ಹಾಗೂ ಗ್ರಾಮ ಸಮಿತಿಗಳನ್ನು ರಚಿಸಲಾಗುವುದು. ಮುಂದಿನ 20 ದಿನಗಳಲ್ಲಿ ರಾಜ್ಯ ಮಟ್ಟದ ವಾರ್ ರೂಮ್ ರಚಿಸಲಾಗುವುದು ಎಂದು ಹೇಳಿದರು.
ದಿನನಿತ್ಯದ ಅಜೆಂಡಾವನ್ನು ಎಲ್ಲರಿಗೂ ಕಳುಹಿಸಿಕೊಡಲಾಗುವುದು. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳ ವಿಚಾರ ಚರ್ಚೆ ಮಾಡಬೇಕು. ನಾವು ಅನುಭವಕ್ಕೆ ಪ್ರಾಮುಖ್ಯತೆ ನೀಡುತ್ತೇವೆ. ಹೀಗಾಗಿ ಪಕ್ಷದ ಹಿರಿಯರನ್ನು ಕಡೆಗಣಿಸದೇ, ಗೌರವಿಸುತ್ತಾ ಅವರ ಮಾರ್ಗದರ್ಶನ ಪಡೆಯಲು ಅವರಿಗೆ ಸೂಕ್ತ ಸ್ಥಾನಮಾನ ನೀಡಿ ಹೊಸ ಮುಖಗಳಿಗೆ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಶೇ.50ರಷ್ಟು ಅವಕಾಶವನ್ನು 50 ವರ್ಷದೊಳಗಿನವರಿಗೆ ನೀಡಲು ಉದಯಪುರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಇದೊಂದು ಐತಿಹಾಸಿಕ ಕಾರ್ಯಕ್ರಮ: ಡಿಕೆಶಿ
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಾನು ಪಕ್ಷದ ಅಧ್ಯಕ್ಷನಾಗಿ ಜವಾಬ್ದಾರಿ ತೆಗೆದುಕೊಂಡಾಗ, ‘ಜತೆಗೂಡುವುದು ಆರಂಭ, ಜತೆಗೂಡಿ ಯೋಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು’ ಎಂದು ಹೇಳಿದ್ದೆ. ಈ ಚಿಂತನ ಮಂಥನ ಶಿಬಿರವನ್ನು 7-8 ತಿಂಗಳ ಹಿಂದೆಯಾ ನಡೆಸಲು ಯೋಚಿಸಿದ್ದೆವು. ಉಪಚುನಾವಣೆ, ಹೋರಾಟ, ಅಧಿವೇಶನ, ದೆಹಲಿ ಕಾರ್ಯಕ್ರಮ ಮತ್ತಿತರ ಕಾರಣಗಳಿಂದ ನಾಲ್ಕು ಬಾರಿ ಮುಂದೂಡಲಾಗಿತ್ತು. ಕೊಡಗು, ಹುಬ್ಬಳ್ಳಿ, ಮಂಗಳೂರಿನಲ್ಲಿ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಎಐಸಿಸಿ ಕೊಟ್ಟಿರುವ ಸೂಚನೆ, ಮಾರ್ಗದರ್ಶನದ ಪ್ರಕಾರ ನಾನು ಈ ಸಭೆ ಮಾಡುತ್ತಿದ್ದೇವೆ. ಅವರ ಸೂಚನೆಯಂತೆ ಆರು ಸಮಿತಿಗಳನ್ನು ರಚಿಸಲಾಗಿದೆ ಎಂದರು.
ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಯಾವ ದಿಕ್ಕಿನಲ್ಲಿ ಹೋಗಬೇಕು, ಯಾವ ರೀತಿ ಹೋರಾಟ ಮಾಡಬೇಕು ಎಂದು ಉದಯಪುರ ನವಸಂಕಲ್ಪ ಶಿಬಿರದಲ್ಲಿ ತೀರ್ಮಾನ ಮಾಡಲಾಗಿದೆ.ಕಾರ್ಯಾಧ್ಯಕ್ಷರಿದ್ದರೂ ಸಮಿತಿಗಳಿಗೆ ಬೇರೆ ನಾಯಕರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು, ಉದಯಪುರ ಸಭೆಯಲ್ಲಿ ಭಾಗವಹಿಸಿದ್ದವರಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಸಮಿತಿಗಳು ನಿನ್ನೆ, ಮೊನ್ನೆ ಚರ್ಚೆ ಮಾಡಿ ಸಲಹೆಗಳ ಪಟ್ಟಿ ಮಾಡಿದ್ದು, ಇಂದು ಆ ಬಗ್ಗೆ ಚರ್ಚಿಸಲಾಗುವುದು. ಈ ಸಮಿತಿಗಳಲ್ಲಿ ಇಲ್ಲದ, ಸಲಹೆ ನೀಡಲು ಬಯಸುವವರು ಅದನ್ನು ಲಿಖಿತ ರೂಪದಲ್ಲಿ ನೀಡಬಹುದು. ಅಮೂಲ್ಯ ಸಲಹೆಗಳನ್ನು ಸೇರ್ಪಡೆ ಮಾಡಿಕೊಂಡು ಚರ್ಚಿಸಲಾಗುವುದು. ನಿಮ್ಮ ಸಲಹೆ ರಾಜ್ಯ ಹಾಗೂ ದೇಶದ ಭವಿಷ್ಯ, ಪಕ್ಷದ ಬಲವರ್ಧನೆ, 2023 ಹಾಗೂ 2024 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಇರಲಿ ಎಂದು ಹೇಳಿದರು.
ರಾಜ್ಯದಲ್ಲಿ 78 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಅದರಲ್ಲಿ ಶೇ.42 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು, ಶೇ.42 ರಷ್ಟು ಮಂದಿ ಮಹಿಳೆಯರು. ಸದಸ್ಯತ್ವ ನೋಂದಣಿ ಮುಂದುವರಿಯಲಿದ್ದು, ಬೂತ್ ಮಟ್ಟದ ಸಮಿತಿ ಸೇರಿ ಎಲ್ಲ ಸಮಿತಿಗಳನ್ನು ರಚಿಸಲು ಕಾಲಮಿತಿ ನಿಗದಿ ಮಾಡಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಆಗಸ್ಟ್ 9 ರಿಂದ ಆಗಸ್ಟ್ 15 ರ ವರೆಗೆ ಜಿಲ್ಲಾ ಮಟ್ಟದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ರಾಷ್ಟ್ರ ನಾಯಕರು ಸೂಚಿಸಿದ್ದಾರೆ. ಯುವಕರು, ವಿದ್ಯಾರ್ಥಿಗಳು, ಎಲ್ಲಾ ವರ್ಗದವರನ್ನು ಸೇರಿಸಿಕೊಂಡು ಸರಕಾರದ ವೈಫಲ್ಯಗಳ ವಿರುದ್ಧ ದೊಡ್ಡ ಹೋರಾಟ ಮಾಡಬೇಕಾಗಿದೆ. ನಿಮ್ಮ ಕ್ಷೇತ್ರ, ಜಿಲ್ಲೆ ಹಾಗೂ ರಾಜ್ಯಕ್ಕೆ ಪ್ರತ್ಯೇಕ ಪ್ರಣಾಳಿಕೆ ಮಾಡಬೇಕು. ಕರಾವಳಿ, ಮಲೆನಾಡು, ಬೆಂಗಳೂರು, ಕಲ್ಯಾಣ ಕರ್ನಾಟಕ ಸೇರಿದಂತೆ ಎಲ್ಲಾ ವಲಯಕ್ಕೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಬೇಕು. ಎಲ್ಲಾ ವರ್ಗದ ಜನರ ಸೇವೆಗೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು. ಉತ್ತಮ ಆಡಳಿತ ನೀಡುವ ಸರ್ಕಾರ ರಚಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಚಿಂತನಾ ಶಿಬಿರದಲ್ಲಿ ಸಿದ್ದರಾಮಯ್ಯ ಮಾತನಾಡಿ, 2024ಕ್ಕೆ ಲೋಕಸಭಾ ಚುನಾವಣೆ ಇದೆ, ಕರ್ನಾಟಕದಲ್ಲಿ 2023ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡಯಲಿದೆ. ಇವುಗಳ ಜೊತೆಗೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳಿಗೆ, ಮಹಾನಗರ ಪಾಲಿಕೆ ಚುನಾವಣೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನವ ಸಂಕಲ್ಪ ಚಿಂತನಾ ಶಿಬಿರ ಆಯೋಜಿಸಲಾಗಿದೆ. ಪಕ್ಷ ಬೂತ್ ಮಟ್ಟದಿಂದ ಕೆಪಿಸಿಸಿ ಮಟ್ಟದ ವರೆಗೆ ಸಂಘಟಿತಗೊಂಡರೆ ಚುನಾವಣೆಗಳ ಗೆಲುವು ಕಷ್ಟದ ಕೆಲಸವಲ್ಲ. ಇಂತಹ ಹಲವು ಚುನಾವಣೆಗಳನ್ನು ಯಶಸ್ವಿಯಾಗಿ ಪಕ್ಷ ಈಗಾಗಲೇ ಎದುರಿಸಿದೆ ಕೂಡ. ಪಕ್ಷವನ್ನು ಬಲಪಡಿಸಲು ಅನೇಕ ಕ್ರಮಗಳನ್ನು ಎಐಸಿಸಿ ಹಾಗೂ ಕೆಪಿಸಿಸಿ ತೆಗೆದುಕೊಳ್ಳಲು ಆರಂಭ ಮಾಡಿದೆ. ಅದರ ಭಾಗವಾಗಿ ಈ ಸಭೆಯೂ ನಡೆಯುತ್ತಿದೆ. ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆಸಬೇಕು ಎಂಬ ಆದೇಶವಾಗಿದೆ. ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಸರ್ಕಾರದ ಮೀಸಲಾತಿ ಬಗ್ಗೆ ಒಂದು ತೀರ್ಪನ್ನು ನೀಡಿದೆ. ತೀರ್ಪಿನ ಪ್ರಕಾರ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವಾಗ ಒಂದು ನಂಬಿಕಾರ್ಹ ಮಾಹಿತಿ ಇರಬೇಕು ಮತ್ತು ಮೀಸಲಾತಿ ಪ್ರಮಾಣ 50% ಮೀರಬಾರದು ಎಂದು ಹೇಳಿದೆ. ಇದು 2021 ಏಪ್ರಿಲ್ ನಲ್ಲಿ ನೀಡಿದ ತೀರ್ಪಾಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಈ ತೀರ್ಪು ಬಂದ ಮೇಲೆ ಯಾವ ಕ್ರಮ ಕೈಗೊಂಡಿಲ್ಲ, ಇತ್ತೀಚೆಗೆ ಭಕ್ತವತ್ಸಲಂ ಅವರ ಸಮಿತಿ ರಚನೆ ಮಾಡಿದೆ, ಆ ಸಮಿತಿ ಇನ್ನು ವರದಿ ನೀಡಿಲ್ಲ. ಹತ್ತು ವಾರದಲ್ಲಿ ಚುನಾವಣೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ನಮ್ಮ ಪಕ್ಷವು ಸರ್ವ ಪಕ್ಷ ಸಭೆಯಲ್ಲಿ ಬಹಳ ಸ್ಪಷ್ಟವಾಗಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬಾರದು ಎಂದು ಹೇಳಿದೆ. ಹಿಂದುಳಿದ ಜಾತಿಗಳಿಗೆ, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ರಾಜೀವ್ ಗಾಂಧಿ ಅವರು ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿದ ನಂತರ. ಮಹಿಳೆಯರಿಗೆ 50%, ಹಿಂದುಳಿದ ಜಾತಿಗಳಿಗೆ 33% ಮೀಸಲಾತಿ ನೀಡಿದ್ದು. ಇದರಲ್ಲಿ ಅಲ್ಪಸಂಖ್ಯಾತರು ಹಾಗೂ ಇನ್ನಿತರೆ ಜಾತಿಗಳು ಸೇರುತ್ತವೆ. ಕಾಂಗ್ರೆಸ್ ಪಕ್ಷ ರಾಜಕೀಯ ಮೀಸಲಾತಿ ನೀಡಿದ್ದು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವರಾದ ಆರ್.ವಿ. ದೇಶಪಾಂಡೆ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಧ್ರುವನಾರಾಯಣ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.