ಹೊಸದಿಲ್ಲಿ: ಕೂದಲನ್ನು ಭಾರತದಿಂದ ಚೀನಾಕ್ಕೆ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾಗುತ್ತಿರುವ ದಂಧೆಯನ್ನು ಜಾರಿ ನಿರ್ದೇಶನಾಲಯ (ಇ ಡಿ) ಪತ್ತೆ ಹಚ್ಚಿದೆ.
ಹಾಗೆಯೇ ಕಳ್ಳಮಾರ್ಗದಲ್ಲಿ ಕೂದಲು ಕಳುಹಿಸಿಕೊಟ್ಟ ವ್ಯಕ್ತಿಗಳಿಗೆ ಕೋಟ್ಯಂತರ ರೂ. ಹಣವೂ ಪಾವತಿಯಾಗುತ್ತದೆ. ಈ ರೀತಿಯ ಒಂದು ದೊಡ್ಡ ದಂಧೆಯೇ ನಡೆಯುತ್ತಿದೆ.
ಫೆ.9, 10ರಂದು ಅಕ್ರಮ ಹಣಸಾಗಣೆಗೆ ಸಂಬಂಧಪಟ್ಟಂತೆ ಚೀನಾದ ಮೊಬೈಲ್ ಬೆಟ್ಟಿಂಗ್ ಆ್ಯಪ್ಗಳ ಬಗ್ಗೆ ಇ.ಡಿ ತನಿಖೆ ನಡೆಸಿತ್ತು. ಈ ವೇಳೆ ಹೈದರಾಬಾದ್ನಿಂದ ಮಿಜೋರಾಮ್ನ ಚಂಫಾಯ್ವರೆಗೆ ಕೂದಲು ಕಳ್ಳಸಾಗಣೆಯಾಗುತ್ತಿರುವುದು ಪತ್ತೆಯಾಗಿದೆ. ಚಂಫಾಯ್, ನೆರೆಯ ರಾಷ್ಟ್ರ ಮ್ಯಾನ್ಮಾರ್ ಗೆ ಹತ್ತಿರದಲ್ಲಿದೆ. ಹೀಗೆ ಮ್ಯಾನ್ಮಾರ್ ಗೆ ತಲುಪುವ ಕೂದಲು, ಅಲ್ಲಿಂದ ಚೀನಾಕ್ಕೆ ತಲುಪುತ್ತದೆ.
ವಿಶ್ವವಿಖ್ಯಾತ ತಿರುಪತಿ ದೇವಸ್ಥಾನವಿರುವುದು ಆಂಧ್ರಪ್ರದೇಶದಲ್ಲಿ. ಇಲ್ಲಿಗೆ ಕೋಟ್ಯಂತರ ಭಕ್ತರು ಬಂದು ಕೂದಲನ್ನು ಅರ್ಪಿಸುತ್ತಾರೆ. ಈ ರಾಜ್ಯದಲ್ಲಿ ಕೂದಲಿನ ಮಾರಾಟವೂ ಜೋರಾಗಿದೆ. ಇದು ಮುಂದೆ ಗುವಾಹಟಿ, ಕಲ್ಕತ್ತ, ಮ್ಯಾನ್ಮಾರ್, ನಂತರ ಚೀನಾಕ್ಕೂ ಹೋಗುತ್ತದೆ. ಇಲ್ಲಿಗೆಲ್ಲ ಹಣ ಪಾವತಿಯಾಗುವುದು ಮಿಜೋರಾಮ್ನ ಶೆಲ್ ಬ್ಯಾಂಕ್ಗಳ (ಈ ಬ್ಯಾಂಕ್ಗಳು ಭೌತಿಕವಾಗಿ ಅಸ್ತಿತ್ವದಲ್ಲಿರುವುದಿಲ್ಲ) ಮೂಲಕ ಎಂದು ಇಡಿ ಹೇಳಿದೆ.