Home ಟಾಪ್ ಸುದ್ದಿಗಳು ಗುಜರಾತ್ ಚುನಾವಣೆ: 2002ರ ನರೋಡಾ ಪಾಟಿಯಾ ಗಲಭೆ ಅಪರಾಧಿಯ ಪುತ್ರಿಗೆ ಟಿಕೆಟ್

ಗುಜರಾತ್ ಚುನಾವಣೆ: 2002ರ ನರೋಡಾ ಪಾಟಿಯಾ ಗಲಭೆ ಅಪರಾಧಿಯ ಪುತ್ರಿಗೆ ಟಿಕೆಟ್

ಅಹಮದಾಬಾದ್: ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಗೆ 2002ರಲ್ಲಿ ನಡೆದ ಗೋಧ್ರಾ ಬಳಿಕದ ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದ ಅಪರಾಧಿಯ ಮಗಳನ್ನು ಅಹಮದಾಬಾದ್’ನ ನರೋಡ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

97 ಮಂದಿ ಮುಸ್ಲಿಮರನ್ನು ಹತ್ಯೆ ನಡೆಸಿದ ನರೋಡಾ ಪಾಟಿಯಾ ಗಲಭೆ ಪ್ರಕರಣದ 16 ಅಪರಾಧಿಗಳಲ್ಲಿ ಮನೋಜ್ ಕುಕ್ರಾಣಿ ಕೂಡ ಒಬ್ಬರು. ಅವರ ಪುತ್ರಿ ಪಾಯಲ್ ಕುಕ್ರಾಣಿ ಅವರಿಗೆ ಈ ಬಾರಿ ಆಡಳಿತರೂಢ ಬಿಜೆಪಿ ಪಕ್ಷ ಚುನಾವಣಾ ಟಿಕೆಟ್ ನೀಡಿದೆ. ವೃತ್ತಿಯಲ್ಲಿ ಅರಿವಳಿಕೆ ತಜ್ಞೆಯಾಗಿರುವ ಆಕೆ, ಕಣದಲ್ಲಿರುವವರ ಪೈಕಿ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ನರೋಡಾ ಪಾಟಿಯಾ ಗಲಭೆ ಪ್ರಕರಣದಲ್ಲಿ ಮನೋಜ್ ಕುಕ್ರಾಣಿ ಮತ್ತು ಇತರ 15 ಮಂದಿಯ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ 2018ರಲ್ಲಿ ಎತ್ತಿಹಿಡಿದಿತ್ತು. ಜೀವಾವಧಿ ಶಿಕ್ಷೆಗೊಳಗಾಗಿರುವ ಕುಕ್ರಾಣಿ ಅವರು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

ತನ್ನನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಿಜೆಪಿಯ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ ಪಾಯಲ್ ಕುಕ್ರಾಣಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಆರ್. ಪಾಟೀಲ್, ಮುಖ್ಯಮಂತ್ರಿ ಭೂಪೆಂದ್ರ ಪಟೇಲ್, ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಸದಸ್ಯರಿಗೆ ನಾನು ಅಭಾರಿಯಾಗಿದ್ದೇನೆ. ನನ್ನ ತಾಯಿ ಕಾರ್ಪೋರೇಟರ್ ಆಗಿದ್ದು, ನನ್ನ ತಂದೆ – ತಾಯಿ ಬಹಳ ಹಿಂದಿನಿಂದಲೂ ಬಿಜೆಪಿ ಜೊತೆ ಒಡನಾಟ ಹೊಂದಿದ್ದಾರೆ. ನಾನು ಈ ಹಿಂದೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆ ಎಂದು ತಿಳಿಸಿದರು.

Join Whatsapp
Exit mobile version