Home ಟಾಪ್ ಸುದ್ದಿಗಳು ಕಸ್ಟಡಿ ಸಾವು: ಪೊಲೀಸರೇ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದ ಪುತ್ರಿ

ಕಸ್ಟಡಿ ಸಾವು: ಪೊಲೀಸರೇ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದ ಪುತ್ರಿ

ಬೆಳಗಾವಿ: ಆರೋಪಿಯೊಬ್ಬ ಪೊಲೀಸರ ವಶದಲ್ಲಿದ್ದ ವೇಳೆಯೇ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆರೋಪಿ ಬಸನಗೌಡ ಪಾಟೀಲ್ ಪುತ್ರಿ ರೋಹಿಣಿ ಪಾಟೀಲ್ ಪ್ರತಿಕ್ರಿಯೆ ನೀಡಿದ್ದು, ಚಿತ್ರಹಿಂಸೆ ನೀಡಿ ಪೊಲೀಸರು ನಮ್ಮ ತಂದೆಯನ್ನು ಕೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ, ನಮ್ಮ ತಂದೆಯ ವಿರುದ್ಧ ಸುಳ್ಳು ಕೇಸ್ ಹಾಕಲಾಗಿದೆ. ನಮಗೆ ನ್ಯಾಯ ಸಿಗಬೇಕು. ಬಿಪಿ, ಶುಗರ್ ಸೇರಿ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ತಂದೆಯ ಕೈಗೆ ಹಗ್ಗ ಕಟ್ಟಿ, ಚಿತ್ರಹಿಂಸೆ ನೀಡಿದ್ದು, ಪೊಲೀಸ್ ಠಾಣೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.


ಶುಕ್ರವಾರ ಮಧ್ಯಾಹ್ನ ನನ್ನ ತಂದೆಯನ್ನು ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಫೋನ್ ಮಾಡಿ ತಕ್ಷಣ ಬನ್ನಿ ಎಂದು ಪೊಲೀಸರು ಹೇಳಿದ್ದರು. ರಾತ್ರಿ 10ಕ್ಕೆ ಹೋಗಿ ನೋಡಿದಾಗ ತಂದೆ ಬೆಡ್ ಮೇಲೆ ಇದ್ದರು. ವೈದ್ಯರು ಇನ್ನೂ ಜೀವ ಹೋಗಿಲ್ಲ ಎಂದು ಹೇಳಿದ್ದರು. ನಾನು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯಾಗಿದ್ದರಿಂದ ತಂದೆಯ ಪಲ್ಸ್ ನೋಡಿದೆ. ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಆಮೇಲೆ ವೈದ್ಯರು ನಿಮ್ಮ ತಂದೆ ಇನ್ನಿಲ್ಲ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ, ಬೆಳಗಾವಿ ನಗರ ಪೊಲೀಸ್ ಕಮಿಷನರ್ ಡಾ. ಬಿ ಎಂ ಬೋರಲಿಂಗಯ್ಯ ಅವರು, ಸದ್ಯಕ್ಕೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.

Join Whatsapp
Exit mobile version