ಜಿಎಸ್ ಟಿ ಎಂಬ ಮಹಾಮೋಸದ ತೆರಿಗೆ

Prasthutha|

ಬೆಲೆ ಏರಿಕೆಯಿಂದ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಮಧ್ಯಮ, ಕೆಳ ಮಧ್ಯಮ, ಸಣ್ಣ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಕಾರ್ಮಿಕರು ಮತ್ತು ಬಡವರ ಬವಣೆ ಹೇಳ ತೀರದು. ಕೇವಲ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಮಾತ್ರ ಬೆಲೆ ಏರಿಕೆ ಆಗಿರುವುದಲ್ಲ. ಪ್ರತಿಯೊಂದು ಪದಾರ್ಥಕ್ಕೂ, ಪ್ರತಿಯೊಂದು ಸೇವೆಗೂ ಬೆಲೆ ಏರಿಕೆ ಆಗಿದೆ. ಡೀಸೆಲ್ ಬೆಲೆ ಏರಿಕೆ ಆದ ಕೂಡಲೇ ಸಾಗಾಟ ವೆಚ್ಚ ಹೆಚ್ಚಳವಾಗುತ್ತದೆ. ಅದರೊಂದಿಗೆ ದೈನಂದಿನ ಉಪಯೋಗದ ವಸ್ತುಗಳ ಬೆಲೆ ಏರಿಕೆ ಆಗಿದೆ.

- Advertisement -

ದೈನಂದಿನ ಖರ್ಚು ವೆಚ್ಚಗಳನ್ನು ಸರಿದೂಗಿಸುವುದೇ ದುಸ್ತರವಾಗಿರುವ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಉತ್ತಮ ಊಟ, ಉಡುಗೆ ತೊಡುಗೆ, ಶಿಕ್ಷಣ ನೀಡುವುದು ಕನಸಿನ ಮಾತಾಗಿದೆ. ಐದಾರು ವರ್ಷಗಳ ಹಿಂದೆ ಅನುಕೂಲಸ್ಥರಾಗಿದ್ದ ಕುಟುಂಬಗಳು ಇಂದು ಮಕ್ಕಳ ಶಿಕ್ಷಣಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಲೆ ಏರಿಕೆಗೆ ಮುಖ್ಯ ಕಾರಣ ಹಣದುಬ್ಬರ ಅಥವಾ ಇನ್‌ ಫ್ಲೇಷನ್. ಹಣದುಬ್ಬರಕ್ಕೆ ಹಲವು ಕಾರಣಗಳಿವೆ. ಆರ್ಥಿಕ ಕುಸಿತದ ಪರಿಣಾಮ. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಕೂಡ ಭಾರತದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದೆ. ಆದರೆ, ಇದೆಲ್ಲವನ್ನು ಮೆಟ್ಟಿ ನಿಲ್ಲುವ ಆರ್ಥಿಕತೆ ಭಾರತಕ್ಕೆ ಇತ್ತು. ಇಂದಿನ ಸರಕಾರದ ದುರಾಡಳಿತ, ತಪ್ಪು ಆರ್ಥಿಕ ನೀತಿಗಳಿಂದಾಗಿ ಇಂದು ಭಾರತದ ಬಡಪಾಯಿ ಪ್ರಜೆಗಳು ಹಾಹಾಕಾರ ಪಡುವಂತಾಗಿದೆ.

- Advertisement -

ಹಾಗಂತ ದೇಶದಲ್ಲಿ ಇದೇ ಮೊದಲು ಹಣದುಬ್ಬರ, ಬೆಲೆ ಏರಿಕೆ ಸಮಸ್ಯೆ ಎದುರಾಗಿರುವುದಲ್ಲ. ಈ ಹಿಂದೆಯೂ ಬೆಲೆ ಏರಿಕೆ ಆಗಿತ್ತು. ಆಗಿನ ಪರಿಸ್ಥಿತಿಗೂ ಇವತ್ತಿಗೆ ಕೆಲವು ಬದಲಾವಣೆ ಇದೆ. ಹಿಂದಿನ ಕಾಲದಲ್ಲಿ ಹಣದುಬ್ಬರ, ಬೆಲೆಏರಿಕೆ ಇದ್ದರೂ ಕೂಡ ಉದ್ಯೋಗಕ್ಕೆ ಸಮಸ್ಯೆ ಇರಲಿಲ್ಲ. ಇಂದು ನಿರುದ್ಯೋಗ ತಾಂಡವವಾಡುತ್ತಿದೆ. ಅಂದು ದುಡಿದು ಬದುಕುವವನಿಗೆ ಬೆಲೆ ಏರಿಕೆಯ ನಡುವೆಯೂ ಸ್ಥಿರ ಆದಾಯ ಇರುತಿತ್ತು. ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳು ಆತನಿಗೆ ಆಸರೆಯಾಗುತ್ತಿತ್ತು.  ಇಂದು ಎರಡು ಹೊತ್ತಿನ ಊಟ, ವೈದ್ಯಕೀಯ ಸೇವೆ, ಶಿಕ್ಷಣ ದೊರೆಯುವುದು ದುಸ್ತರವಾಗಿದೆ.

ಈ ಹಿಂದೆ ಬೆಲೆ ಏರಿಕೆ ಎಂಬುದು ತಾತ್ಕಾಲಿಕ ವಿಚಾರವಾಗಿತ್ತು. ಈಗ ಹಾಗಿಲ್ಲ, ಕಳೆದ ಎರಡು ಮೂರು ವರ್ಷಗಳಿಂದ ಬೆಲೆ ಏರಿಕೆ ಆಗುತ್ತಲೇ ಇದೆ. ಬೆಲೆ ಏರಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದೆ. ಬೆಲೆ ಏರಿಕೆ ನೇರವಾಗಿ ಜನಸಮಾನ್ಯರಿಗೆ ತಟ್ಟುತ್ತಿದೆ. ಜನರಿಗೆ ಉದ್ಯೋಗ ಮಾತ್ರ ದೊರೆಯುತ್ತಿಲ್ಲ. ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರ ಆಗುತ್ತಿಲ್ಲ. ಇದೇ ಸಂದರ್ಭದಲ್ಲಿ ಅತೀ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಅತಿ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂಪಾಯಿ ಮನ್ನಾ ಮಾಡಲಾಗುತ್ತಿದೆ. ಅದೇ ಸಂದರ್ಭದಲ್ಲಿ ಬಡ ವ್ಯಾಪಾರಿಗಳ ಸಾಲ ಮನ್ನಾ ಹೋಗಲಿ ಬಡ್ಡಿ ಮನ್ನಾ ಕೂಡ ಮಾಡುತ್ತಿಲ್ಲ. ಬ್ಯಾಂಕುಗಳು ಇಂತಹ ಸಾಲಗಾರರಿಗೆ ಇನ್ನಿಲ್ಲದ ಕಾಟ ನೀಡುತ್ತಿವೆ. ವ್ಯಾಪಾರಿಗಳ ಇಂದಿನ ದುಸ್ಥಿತಿಗೆ ಸರಕಾರದ ತಪ್ಪು ನಿರ್ಧಾರಗಳೇ ಕಾರಣ ಆಗಿದ್ದರೂ ಸರಕಾರ ಮಾತ್ರ ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇದೇ ವೇಳೆ ಕಡಿಮೆ ಬಡ್ಡಿದರದಲ್ಲಿ ಉತ್ತಮ ಸಾಲ ಕೂಡ ದೊರೆಯುತ್ತಿಲ್ಲ. ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಿಸುವ ಹೆಸರಲ್ಲಿ ಬ್ಯಾಂಕ್ ಸಾಲಕ್ಕೆ ನಿಯಂತ್ರಣ ಹಾಕಿದೆ. ದಿಕ್ಕೆಟ್ಟ ಜನತೆ ಇದೇ ಸರಕಾರ ಅನುಮತಿ ನೀಡಿರುವ ಮೊಬೈಲ್ ಸಾಲಕ್ಕೆ ಬಲಿ ಆಗುತ್ತಿದ್ದಾರೆ.

ಕಳೆದ ಮಾರ್ಚ್ ತಿಂಗಳ ಅನಂತರ ಕೆಲವು ರಾಜ್ಯಗಳ ಚುನಾವಣೆ ಮುಗಿದ ಕೂಡಲೇ ತೈಲ ಬೆಲೆ ಏರಿಕೆ ಆಗುವುದು ಮುಂದುವರಿಯಿತು. ಇದರಿಂದಾಗಿ ಸಹಜವಾಗಿ ಅಗತ್ಯ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಯಿತು. ಕೇಂದ್ರ ಸರಕಾರ ಅಲ್ಪ ಪ್ರಮಾಣದಲ್ಲಿ ಒಂದು ಬಾರಿ ತೆರಿಗೆ ಕಡಿತ ಮಾಡಿದರೂ ಉತ್ಪಾದಕರ ವೆಚ್ಚವನ್ನು ಸಹಜವಾಗಿ ಗ್ರಾಹಕನಿಗೆ ದಾಟಿಸುತ್ತಾರೆ. ಒಮ್ಮೆ ಎಂಆರ್‌ ಪಿ ದರ ಹಾಕಿದ ಮೇಲೆ ದರ ಕಡಿಮೆ ಮಾಡುವ ಪ್ರಮೇಯವೇ ಇಲ್ಲ. ಇದು ಕೆಲವು ತಿಂಗಳ ಹಿಂದಿನ ಮಾತು. ಕಳೆದ ತಿಂಗಳು ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಹೊಸದಾಗಿ ಜಿಎಸ್‌ಟಿ ಹೇರಲಾಯಿತು. ಇದು ಭಾರತೀಯರ ತೀರ ಅಗತ್ಯವಾದ ದೈನಂದಿನ ಬಳಕೆಯ ವಸ್ತುಗಳು. ರಾಜ್ಯದ ನಂದಿನಿ ಹಾಗೂ ದೇಶದ ಪ್ರಖ್ಯಾತಿಯ ಅಮುಲ್ ಕೂಡಲೇ ದರ ಏರಿಕೆ ಮಾಡಿವೆ. ಗ್ರಾಹಕನ ತಿಂಗಳ ವೆಚ್ಚದಲ್ಲಿ ದೊಡ್ಡ ತೂತು ಕೊರೆಯಲಾಯಿತು.

ಭಾರತದ ಅತಿದೊಡ್ಡ ಡೈರಿ ಉತ್ಪನ್ನಗಳ ಸಂಸ್ಥೆ ಅಮುಲ್ ತನ್ನ ಕೆಲವು ಉತ್ಪನ್ನಗಳ ಬೆಲೆಯನ್ನು 1ರಿಂದ 4 ರುಪಾಯಿವರೆಗೆ ಜುಲೈ 19ರಿಂದಲೇ ಜಾರಿಗೆ ಬರುವಂತೆ ಹೆಚ್ಚಿಸಿತು. ಆಹಾರ ಧಾನ್ಯಗಳು, ಪ್ಯಾಕ್ ಮಾಡಿದ ಮೊಸರು, ಲಸ್ಸಿ, ಮಜ್ಜಿಗೆ ಮೇಲೆ ಶೇ.5ರಷ್ಟು ಜಿಎಸ್ಟಿ ವಿಧಿಸುವ ಜಿಎಸ್‌ ಟಿ ಕೌನ್ಸಿಲ್‌ ನ ನಿರ್ಧಾರವು ಜಾರಿಗೆ ಬಂದ ಮೇಲೆ ಈ ಬೆಲೆ ಏರಿಕೆ ಕ್ರಮವನ್ನು ಅಮುಲ್ ಮಾಡಿದೆ.

ನಂದಿನಿ ಉತ್ಪನ್ನಗಳು ಜನಸಾಮಾನ್ಯರ ಜೇಬನ್ನು ಖಾಲಿ ಮಾಡಲಿದ್ದು, ನಂದಿನಿ ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡಿದೆ. ಹಾಲು ಹೊರತಾಗಿ ಇತರೆ ಉತ್ಪನ್ನಗಳ ದರದಲ್ಲಿ ಹೆಚ್ಚಳ ಆಗಿದೆ. ಒಂದು ಲೀಟರ್ ಮೊಸರಿಗೆ 3 ರೂಪಾಯಿ ಹೆಚ್ಚಳ, ಮಜ್ಜಿಗೆ 200 ಎಂಎಲ್‌ ಗೆ 1 ರೂಪಾಯಿ ಹೆಚ್ಚಳ ಹಾಗೂ ಲಸ್ಸಿ 200 ಎಂಎಲ್‌ ಗೆ 1 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಬೆಲೆ ಏರಿಕೆ ಆಗುತ್ತಿದ್ದರೂ ಅದಕ್ಕೆ ಕೇಂದ್ರ ಸರಕಾರ ತಾನು ಹೊಣೆಯಲ್ಲ ಎಂಬ ಮೊಂಡು ವಾದ ಮಾಡುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 18ರ ಸೋಮವಾರದಿಂದ ಪ್ರೀ- ಪ್ಯಾಕೇಜ್ ಮಾಡಿದ ಉತ್ಪನ್ನಗಳ ಮೇಲೆ ಶೇ. 5ರಷ್ಟು ಜಿಎಸ್‌ ಟಿ ವಿಧಿಸಲಾಗಿತ್ತು. 25 ಕೆಜಿ ಅಥವಾ ಅದಕ್ಕಿಂತ ಕಡಿಮೆ ಪ್ಯಾಕಿಂಗ್‌ ನಲ್ಲಿ ಬ್ರಾಂಡ್ ಮಾಡದ ಉತ್ಪನ್ನಗಳು ವ್ಯಾಪ್ತಿಗೆ ಸೇರಿದ್ದವು. ವಿವಿಧ ಹಿಟ್ಟು, ರವೆ, ಮೈದಾ ಮೇಲೆ ಶೇ. 5ರಷ್ಟು ಜಿಎಸ್ಟಿ ಹೆಚ್ಚಿಸಲಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ 120 ರೂ.ಗಳ 5 ಕೆಜಿ ಹಿಟ್ಟಿನ ಪ್ಯಾಕೆಟ್ 126 ರೂ., 235 ರೂ.ಗಳ 1೦ ಕೆಜಿ ಹಿಟ್ಟಿನ ಪ್ಯಾಕೆಟ್ 250 ರೂ. 25 ರೂ.ಗೆ ಇದ್ದ ಒಂದು ಕೆಜಿ ರವೆ, ಮೈದಾ ಪ್ಯಾಕೆಟ್ ಈಗ 26 ರೂ.ಗೆ ಏರಿಕೆಯಾಗಿತ್ತು.

ಇದರೊಂದಿಗೆ  ದಿನನಿತ್ಯ ಬಳಕೆಯ ವಸ್ತುಗಳ ದರ ಎರ್ರಾಬಿರ್ರಿ ಎರಿಕೆಯಾಗಿದೆ. ಜನರಿಗೆ ಬದುಕು ನಡೆಸುವುದೇ ದುಸ್ತರವಾಗಿದೆ. ಈಗಾಗಲೇ ಬಳಲಿ ಬೆಂಡಾಗಿರುವ ಜನರು ಜೀವನ ನಡೆಸಲು ಹೆಣಗಾಡುವಂತಾಗಿದೆ. ಪ್ರತಿಪಕ್ಷಗಳು ಕೂಡ ಜನರ ಸಮಸ್ಯೆ ಪರ ಹೋರಾಡುವ ಲಕ್ಷಣಗಳು ಕಾಣಿಸುತ್ತಿಲ್ಲ.

 ಏಳೆಂಟು ವರ್ಷಗಳ ಹಿಂದೆ  ಜನರು ಸರಕಾರ ಇದೆಯೊ ಇಲ್ಲವೊ ಎಂಬಂತೆ ನಿಶ್ಚಿಂತೆಯಿಂದ ಜೀವನ ಸಾಗಿಸುತ್ತಿದ್ದರು. ಈಗ ಸರಕಾರ ಯಾಕಿದೆಯೋ, ಯಾವಾಗ ಮತ್ತೊಂದು ತೆರಿಗೆ ಹಾಕಿ ಸತಾಯಿಸುತ್ತದೆಯೇ ಎಂಬ ಆತಂಕದಲ್ಲಿ ಇರುವಂತೆ ಮಾಡಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಕೇಂದ್ರ ಸರಕಾರ ಯಾವುದೇ ಆಗಿದ್ದರೂ ಯಾವುದೇ ರೀತಿಯ ಆರ್ಥಿಕ ಸಂಕಷ್ಟ ಇದ್ದರು ಕೂಡ ಬಡವರಿಗೆ ಎರಡು ಹೊತ್ತಿನ ಊಟಕ್ಕೆ ಸಮಸ್ಯೆ ಆಗಿರಲಿಲ್ಲ, ತಲೆಗೊಂದು ಸೂರು ದೊರೆಯುತ್ತಿತ್ತು. ಶಿಕ್ಷಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲ ದೊರೆಯುತಿತ್ತು. ಇದರಿಂದಾಗಿ ಜನರ ಜೀವನ ಮಟ್ಟ ಉತ್ತಮವಾಗಿತ್ತು. ಈಗ ಯಾವುದೇ ರೀತಿಯ ಸಮಾಜ ಕಲ್ಯಾಣ ಯೋಜನೆಗಳು ಜಾರಿಯಲ್ಲಿ ಇಲ್ಲ.

ಕೃಷಿ ಕ್ಷೇತ್ರದಲ್ಲಿ ಕೂಡ ಅಡಕೆ ಹೊರತುಪಡಿಸಿ ಬಹುತೇಕ ಬೆಳೆಗಳ ಖರೀದಿ ದರ ಕಡಿಮೆಯಾಗಿದೆ. ತೆಂಗಿನ ಕಾಯಿ, ಕರಿಮೆಣಸು ದರ ಕಡಿಮೆಯಾಗಿದೆ. ಆದರೆ ತರಕಾರಿ ಬೆಲೆಯಲ್ಲಿ ಹೆಚ್ಚಳವಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ಧನ ದೊರೆಯುತ್ತಿಲ್ಲ. ಗ್ರಾಮೀಣ ಉದ್ಯೋಗ ಕನಿಷ್ಠ ಮಟ್ಟದ ಸ್ಥಿರತೆ ಇದೆ. ಆದರೆ, ಸರಾಸರಿ ಉದ್ಯೋಗಾವಕಾಶ ಕಡಿಮೆ ಆಗಿರುವುದು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿದೆ.

ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ತಂದಿರುವ ಅವೈಜ್ಞಾನಿಕ ಆರ್ಥಿಕ ಯೋಜನೆಗಳು ದೇಶದ ಜನರ ಬದುಕನ್ನು ದುಸ್ತರ ಮಾಡಿದೆ.

ಮೊದಲಿಗೆ ಬೇಕಾಬಿಟ್ಟಿಯಾಗಿ ಜಾರಿಗೆ ತಂದ  ನೋಟು ಬ್ಯಾನ್ ಕಪ್ಪು ಹಣವನ್ನು ಹೊರತರಲಿಲ್ಲ. ಬದಲಿಗೆ ತಂದಿರುವ ತೊಂದರೆಗಳೇ ಜಾಸ್ತಿ. ನೋಟು ಬಂದಿಯಿಂದಾದ ಆರ್ಥಿಕ ಹಿನ್ನಡೆಯನ್ನು ಎದುರಿಸುವುದಕ್ಕೂ ಮುನ್ನ ಸರಿಯಾಗಿ ಆಲೋಚಿಸದೆ ಜಾರಿಗೆ ತಂದ ಜಿಎಸ್‌ಟಿ ತೆರಿಗೆ ಪದ್ಧತಿ ಇನ್ನಷ್ಟು ಅನಾಹುತಗಳನ್ನು ನಡೆಸಿತು.

ಅನಂತರ ಕೊರೊನಾ ಹೆಸರಲ್ಲಿ ಮಾಡಿರುವ ಅವೈಜ್ಞಾನಿಕ ಲಾಕ್‌ ಡೌನ್ ದೇಶವನ್ನು ಸಂಪೂರ್ಣ ನಿರ್ಗತಿಕ ದೇಶವನ್ನಾಗಿ ಮಾಡಿತು. ಇದು ಸಾಲದು ಎಂಬಂತೆ ರಾಜ್ಯಗಳಿಗೆ ಸರಿಯಾದ ಜಿಎಸ್‌ ಟಿ ಪರಿಹಾರ ನೀಡದೆ ಅನ್ಯಾಯ ಮಾಡಲಾಯಿತು. ಸರಕಾರವೇ ಬಹುದೊಡ್ಡ ಹೂಡಿಕೆದಾರ. ಆದರೆ ಬಿಜೆಪಿ ಸರಕಾರ ಬಂದ ಮೇಲೆ ಕಲ್ಯಾಣ ಕಾರ್ಯಕ್ರಮಗಳು ಸ್ಥಗಿತಗೊಂಡವು ಅದರೊಂದಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಕೂಡ ಕಡಿಮೆಯಾಯಿತು. ಮಾರುಕಟ್ಟೆಯಲ್ಲಿ ಹಣದ ಚಲಾವಣೆ ಆಗದೆ ಇದ್ದಾಗ ಆರ್ಥಿಕ ಚೇತರಿಕೆ ಅಸಾಧ್ಯ.

Join Whatsapp
Exit mobile version