ಬೆಂಗಳೂರು: ಜನಗಣತಿ ವಿರೋಧಿಸಿ ರಾಜ್ಯದಾದ್ಯಂತ ಹೋರಾಟ ನಡೆಸಲು ರಾಜ್ಯ ಒಕ್ಕಲಿಗರ ಸಂಘ ನಿರ್ಧರಿಸಿದ್ದು, ಏ.17ರ ನಂತರ ಹೋರಾಟದ ರೂಪುರೇಷೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಅವರು, ಜಾತಿ ಗಣತಿ ವರದಿಯನ್ನು ಹಿಂಪಡೆಯಬೇಕು. ಒಂದು ವೇಳೆ ವರದಿ ಜಾರಿಗೊಳಿಸಿದರೆ ಸರ್ಕಾರ ಉಳಿಯುವುದಿಲ್ಲ ಮತ್ತು ಕರ್ನಾಟಕ ಬಂದ್ ರೀತಿಯ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರ ಕಾಂತರಾಜು ಆಯೋಗದ ವರದಿ ಜಾರಿ ಮಾಡಲು ಹೊರಟಿದೆ. ಆದರೆ ಅದರ ವಿರುದ್ದ ಹೋರಾಟ ಮಾಡಲು ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ. ಮುಂದಿನ ಹಂತದಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದರ ಬಗ್ಗೆ ಇಂದು ಚರ್ಚಿಸಲಾಗಿದೆ ಎಂದರು.
ಕಾಂತರಾಜು ಅವರ ವರದಿ ಆರೋಗ್ಯಕರವಾಗಿಲ್ಲ. 10 ವರ್ಷಗಳ ಹಿಂದೆ ಸಮೀಕ್ಷೆ ಮಾಡಿದ ವರದಿಯನ್ನ ಈಗ ಜಾರಿಗೊಳಿಸಲು ಮುಂದಾಗಿದೆ. ಈ ವರದಿಯಲ್ಲಿ ಒಕ್ಕಲಿಗ ಜನಾಂಗವನ್ನ ಕೇವಲ 61ಲಕ್ಷ ತೋರಿಸಲಾಗಿದೆ ಎಂದರು.
ರಾಜ್ಯದ 224 ಕ್ಷೇತ್ರದಲ್ಲಿ ಒಕ್ಕಲಿಗರು ಕೇವಲ 61ಲಕ್ಷ ಮಾತ್ರ ಇರಲು ಸಾಧ್ಯವೇ ಇಲ್ಲ. ಒಂದೊಂದು ತಾಲೂಕಲ್ಲೂ 60 ಸಾವಿರದಿಂದ 1ಲಕ್ಷಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರಿದ್ದಾರೆ. ಆದರೆ ಈ ವರದಿಯಲ್ಲಿ ನಮ್ಮ ಜನಾಂಗವನ್ನ 6ನೇ ಸ್ಥಾನದಲ್ಲಿ ಇರಿಸಲಾಗಿದೆ. ಇದು ಬೇರೆ ಜನಾಂಗಕ್ಕೆ ಮೀಸಲಾತಿ ನೀಡುವ ಉದ್ದೇಶದಿಂದ ಮಾಡುವ ಹುನ್ನಾರ. ಹೀಗಾಗಿ ನಾವು ಕರ್ನಾಟಕ ಬಂದ್ ಮಾಡುವುದರ ಮೂಲಕ ಹೋರಾಟ ಮಾಡಬೇಕಾಗುತ್ತೆ. ಜಾತಿ ಗಣತಿ ವರದಿಯಲ್ಲಿ ಸಾಕಷ್ಟು ಜನಾಂಗಕ್ಕೆ ಅನ್ಯಾಯವಾಗಿದೆ. ಹೀಗಾಗಿ ಇದನ್ನು ಹಿಂಪಡೆಯಬೇಕು ಮತ್ತು ಮರುಪರಿಶೀಲನೆ ಮಾಡಬೇಕು ಎಂದರು.