ರಾಯಚೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸುತ್ತಿದೆ. ತನಿಖೆ ಪೂರ್ಣಗೊಂಡ ಬಳಿಕವೇ ಸತ್ಯ ಹೊರಬರಲಿದೆ. ಈ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರವಾಗಬೇಕಾದುದು ಏನೂ ಇಲ್ಲ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿದ್ದಾರೆ.
ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಸಚಿವ ನಾಗೇಂದ್ರ ಅವರ ನಿವಾಸದ ಮೇಲೆ ಇ.ಡಿ ದಾಳಿ ನಡೆಸಿ ವಿಚಾರಣೆ ಸಂಬಂಧವಾಗಿಯೂ ಪ್ರತಿಕ್ರಿಯಿಸಿದ ಸಚಿವರು, ಅಷ್ಟು ಮಾತ್ರಕ್ಕೆ ಅವರು ತಪ್ಪು ಮಾಡಿದ್ದಾರೆ ಅಂತಲ್ಲ. ತನಿಖೆ ಪೂರ್ಣಗೊಂಡ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಮೇಲೆ ಆರೋಪ ಕೇಳಿ ಬಂದಾಗ ಸಿಬಿಐ ವಿಚಾರಣೆಗೆ ಒಳಪಡಿಸಿತ್ತು. ನಂತರ ಆರೋಪ ನಿರಾಧಾರವಾಗಿದ್ದರಿಂದ ಖುಲಾಸೆಯಾಗಿದ್ದನ್ನು ಮರೆಯಬಾರದು. ತನಿಖಾ ಸಂಸ್ಥೆಗಳಿಗೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ ಮುಕ್ತ ಸ್ವಾತಂತ್ರ್ಯ ನೀಡಿದೆ ಎಂದು ಹೇಳಿದರು.
ಮಾಧ್ಯಮಗಳು ಕೇಳುವುದೊಂದು ನಂತರ ಪ್ರಸಾರ ಮಾಡುವುದು ಇನ್ನೊಂದು. ಹೀಗಾಗಿ ಈ ವಿಷಯದಲ್ಲಿ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ’ಲ ಎಂದರು.