ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆಗೈದಿರುವ ಪೈಶಾಚಿಕ ಕೃತ್ಯವು ಅತ್ಯಂತ ಹೇಯವಾಗಿದ್ದು, ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಘಟನೆಗಳು ನಿರಂತರ ಮರುಕಳಿಸುತ್ತಿದ್ದು ಮಹಿಳೆಯರು ಮತ್ತು ಮಕ್ಕಳು ರಾಜ್ಯದಲ್ಲಿ ಸುರಕ್ಷಿತರಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅತ್ಯಾಚಾರ ಪ್ರಕರಣಗಳ ಸೂಕ್ತ ತನಿಖೆ ನಡೆದು ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗದಿರುವುದೇ ಇಂತಹ ಘಟನೆಗಳು ಮರುಕಳಿಸಲು ಪ್ರಮುಖ ಕಾರಣ. ಆದರೆ ಈ ಪ್ರಕರಣದಲ್ಲಿ ಆರೋಪಿಯನ್ನು ಪೋಲೀಸರು ಎನ್ಕೌಂಟರ್ ನಡೆಸಿ ಹತ್ಯೆಗೈದಿರುವುದು ಅಸಾಂವಿಧಾನಿಕವಾಗಿದೆ.
ಈ ದೇಶದಲ್ಲಿ ಪ್ರತಿರೋಧವನ್ನು ಹತ್ತಿಕ್ಕಲು ಪೊಲೀಸ್ ಎನ್ಕೌಂಟರ್ ದೊಡ್ಡ ಅಸ್ತ್ರವಾಗಿ ಬಳಕೆಯಾಗುತ್ತಾ ಬರುತ್ತಿದೆ.
ಎನ್ಕೌಂಟರ್ ಎಂದಿಗೂ ಸಮರ್ಥನಿಯವಲ್ಲ. ಆರೋಪಿ ತಪ್ಪಿಸಲು ಅಥವಾ ದಾಳಿ ಮಾಡಲು ಯತ್ನಿಸುವಾಗ ಸೊಂಟದ ಕೆಳಗೆ ಗುಂಡು ಹಾರಿಸಲು ಕಾನೂನಾತ್ಮಕವಾಗಿ ಪೋಲೀಸರಿಗೆ ಹಕ್ಕಿದೆ. ಆದರೆ ಈ ಪ್ರಕರಣದಲ್ಲಿ ಆರೋಪಿಯ ಬೆನ್ನಿಗೆ ಗುಂಡು ತಗುಲಿ ಸತ್ತಿರುವುದರಿಂದ ಪೋಲೀಸರ ನಡೆಯು ಅನುಮಾನಕ್ಕೆಡೆಮಾಡಿದೆ. ಸಚಿವ ಸಂಪುಟ ಸದಸ್ಯರು ಪೋಲೀಸರನ್ನು ಬೆಂಬಲಿಸಿ ನೀಡಿರುವ ಬಾಲಿಶ ಹೇಳಿಕೆಗಳು ಪೋಲೀಸರನ್ನು ರಕ್ಷಿಸುವ ತಂತ್ರವಾಗಿದೆ.
ಆದ್ದರಿಂದ ರಾಜ್ಯ ಸರ್ಕಾರವು ಎನ್ಕೌಂಟರ್ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಮುಂದಕ್ಕೆ ಇಂತಹ ಘಟನೆಗಳು ಮರುಕಳಿಸದಂತೆ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆಯನ್ನು ಖಾತ್ರಿ ಪಡಿಸಬೇಕೆಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.