Home Uncategorized ಐವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

ಐವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

ಜರ್ಮನಿ: ಮಾಜಿ ಗಂಡನ ಜೊತೆಗಿನ ದ್ವೇಷವನ್ನು ತೀರಿಸಲು ತನ್ನ ಐವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರಿಗೆ ಜರ್ಮನಿಯ ಜಿಲ್ಲಾ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ ಸೆಪ್ಟಂಬರ್’ನಲ್ಲಿ ಮಕ್ಕಳಾದ ಮೆಲಿನಾ (1), ಲಿಯೋನಿ (2), ಸೋಫಿ (3), ಟಿಮೋ (6) ಲುಕಾ (8)ಗೆ ನಿದ್ರೆ ಮಾತ್ರೆಯನ್ನು ಬೆರಸಿದ ಆಹಾರ ನೀಡಿದ್ದ ತಾಯಿ ಕ್ರಿಸ್ಟಿಯಾನಾ (28), ಬಳಿಕ ಬಾತ್’ಟಬ್’ನಲ್ಲಿ ಮುಳುಗಿಸಿ ಮಕ್ಕಳನ್ನು ಕೊಂದಿದ್ದಳು. ಬಳಿಕ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಎಲ್ಲರ ಮೃತದೇಹಗಳನ್ನು ಬೆಡ್’ನಲ್ಲಿರಿಸಿ, ಮುಖಕ್ಕೆ ಮಾಸ್ಕ್ ಹಾಕಿದ ವ್ಯಕ್ತಿಯೋರ್ವ ತನ್ನ ಮಕ್ಕಳನ್ನು ಹತ್ಯೆಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಳು. ಪೊಲೀಸರ ವಿಚಾರಣೆಯಲ್ಲಿ ತಾನು ಸಿಕ್ಕಿಬೀಳಬಹುದೆಂಬ ಭಯದಲ್ಲಿ ಕ್ರಿಸ್ಟಿಯಾನಾ ರೈಲೈ ಹಳಿಯಲ್ಲಿ ಆತ್ಮಹತ್ಯಗೆ ಯತ್ನಿಸಿದ್ದಳು. ಆದರೆ ಆಕೆಯನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಲಾಗಿತ್ತು.

ಕ್ರಿಸ್ಟಿಯಾನಾಳನ್ನು ಮೂರನೇ ಮದುವೆಯಾಗಿದ್ದ ವ್ಯಕ್ತಿ ಕೆಲ ವರ್ಷಗಳ ಕಾಲ ಸಂಸಾರ ನಡೆಸಿ, ನಾಲ್ಕು ಮಕ್ಕಳಾದ ಬಳಿಕ ಆಕೆಯನ್ನು ಬಿಟ್ಟು ತೆರಳಿದ್ದ. ಇದಾದ ಕೆಲ ಸಮಯದ ಬಳಿಕ ಬೇರೆ ಯುವತಿಯೊಂದಿಗೆ ಪಾರ್ಟಿ ಮಾಡುತ್ತಿದ್ದ ಚಿತ್ರವನ್ನು ಆತ ಫೇಸ್’ಬುಕ್ ನಲ್ಲಿ ಹಾಕಿದ್ದ. ಈ ಚಿತ್ರ ನೋಡಿದ ನಂತರದಲ್ಲಿ ತನ್ನ ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಕ್ರಿಸ್ಟಿಯಾನ ಬಂದಿದ್ದಳು.

ಆದರೆ ಪೊಲೀಸರ ವಿಚಾರಣೆ ವೇಳೆ ಸ್ವತಃ ತಾಯಿಯೇ ಐವರು ಮಕ್ಕಳನ್ನು ಕೊಂದಿರುವುದು ಸಾಬೀತಾದ ಹಿನ್ನಲೆಯಲ್ಲಿ ನ್ಯಾಯಾಲಯವು ಆಕೆಗೆ  ಜೀವಾವಧಿ ಶಿಕ್ಷೆ ವಿಧಿಸಿದೆ. ಅದಾಗಿಯೂ 15 ವರ್ಷಗಳ ಶಿಕ್ಷೆ ಅನುಭವಿಸಿದ ಬಳಿಕ ಪರೋಲ್’ಗಾಗಿ ನ್ಯಾಯಾಲಯವನ್ನು ಸಮೀಪಿಸಬಹುದು ಎಂದು ತೀರ್ಪಿನಲ್ಲಿ ಹೇಳಿದೆ.

Join Whatsapp
Exit mobile version