ನವದೆಹಲಿ: ಗ್ಯಾಸ್ ಸಿಲಿಂಡರ್ ಗಳ ದರವನ್ನು ಮತ್ತೆ 25 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದಾಗಿ ರಾಜಧಾನಿ ದೆಹಲಿಯಲ್ಲಿ ಈಗ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 14.2 ಕೆ ಜಿ ತೂಕದ ಸಿಲಿಂಡರ್ ಗೆ 884 ರೂಪಾಯಿ 50 ಪೈಸೆಯಾಗಿದೆ.
ಹೊಸ ದರ ಇಂದೇ ಜಾರಿಗೆ ಬರಲಿದೆ. ಇನ್ನು 19 ಕೆಜಿ ಕಮರ್ಷಿಯಲ್ ಸಿಲಿಂಡರ್ ಬೆಲೆ 75 ರೂಪಾಯಿ ಹೆಚ್ಚಳವಾಗಿದೆ.
ಕಳೆದ 15 ದಿನಗಳ ಅಂತರದಲ್ಲಿ 50 ರೂಪಾಯಿಯಷ್ಟು ಅಡುಗೆ ಅನಿಲ ದರ ಏರಿಕೆ ಮಾಡಲಾಗಿತ್ತು. ಕಳೆದ ಜನವರಿ 1ರಿಂದ ದೇಶದಲ್ಲಿ ಅಡುಗೆ ಅನಿಲ ಬೆಲೆ 169 ರೂಪಾಯಿಗಳಷ್ಟು ಏರಿಕೆಯಾಗಿದೆ.
ಅಡುಗೆ ಅನಿಲ ಬೆಲೆ ಏರಿಕೆಯಾದಂತೆ ಹೊಟೇಲ್ ಗಳಲ್ಲಿ ಆಹಾರ, ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 14.2 ಕೆಜಿ ತೂಕದ ಸಬ್ಸಿಡಿಯೇತರ ಅಡುಗೆ ಅನಿಲ ಬೆಲೆ 862 ರೂಪಾಯಿ 50 ಪೈಸೆಯಾಗಿದೆ.
ಕಳೆದ ವರ್ಷ ಕೇಂದ್ರ ಸರಕಾರ ಎಲ್ ಪಿಜಿ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಪೂರ್ಣವಾಗಿ ಸ್ಥಗಿತಗೊಳಿಸಿತ್ತು. ಸಬ್ಸಿಡಿ ಮತ್ತು ಸಬ್ಸಿಡಿಯೇತರ ಎಲ್ಲ ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲೂ ಏಕರೂಪಕ್ಕೆ ತರಲಾಗಿದೆ.
ಈಗಾಗಲೇ ಕೋವಿಡ್ ಲಾಕ್ ಡೌನ್ ನಿಂದ ತತ್ತರಿಸಿರುವ ಜನತೆಗೆ ಈ ಬೆಲೆ ಏರಿಕೆ ಮತ್ತಷ್ಟು ಬರೆ ಎಳೆದಂತಾಗಿದೆ.