Home ರಾಜ್ಯ ಇಂಧನ ದರ ಇಳಿಕೆ ಅವೈಜ್ಞಾನಿಕ: ವೆಲ್ಫೇರ್ ಪಾರ್ಟಿ

ಇಂಧನ ದರ ಇಳಿಕೆ ಅವೈಜ್ಞಾನಿಕ: ವೆಲ್ಫೇರ್ ಪಾರ್ಟಿ

ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ₹ 60ಕ್ಕೆ ಹಾಗೂ ಡೀಸೆಲ್ ಬೆಲೆಯನ್ನು ₹ 50ಕ್ಕೆ ಇಳಿಸಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಆಗ್ರಹಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಪ್ರತೀ ಲೀಟರ್ ಗೆ ₹ 5, ಡೀಸೆಲ್ ಬೆಲೆಯನ್ನು ₹ 10ಕ್ಕೆ ಇಳಿಸಿದೆ. ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ₹ 7 ಕಡಿಮೆ ಮಾಡಿದೆ. ಬೆಲೆ ಇಳಿಕೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೀಪಾವಳಿ ಬಂಪರ್ ಗಿಫ್ಟ್ ಎಂದು ಬೆನ್ನು ತಟ್ಟಿಕೊಳ್ಳುತ್ತಿವೆ. ಇಷ್ಟು ಬೆಲೆ ಇಳಿಕೆಯಿಂದ ಗ್ರಾಹಕರಿಗೆ ಯಾವುದೇ ಅನುಕೂಲ ಆಗುವುದಿಲ್ಲ. ಮೂರ್ನಾಲ್ಕು ತಿಂಗಳಿನಿಂದ ಪ್ರತಿ ದಿನ ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿದ ಸರ್ಕಾರ ಈಗ ಸ್ವಲ್ಪ ಪ್ರಮಾಣದಲ್ಲಿ ಬೆಲೆ ಇಳಿಕೆ ಮಾಡಿ ಜನರ ಕಣ್ಣೊರೆಸುವ ನಾಟಕ ಆಡುತ್ತಿದೆ. ಬೆಲೆ ಹೆಚ್ಚಿಸಿದ ಪ್ರಮಾಣಕ್ಕೆ ಹೋಲಿಸಿದರೆ ಇಳಿಸಿರುವ ಬೆಲೆ ಯಾವ ಲೆಕ್ಕಕ್ಕೂ ಅಲ್ಲ’ ಎಂದು ಆರೋಪಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಸರ್ಕಾರಕ್ಕೆ ಇಷ್ಟು ಸಾವಿರ ಕೋಟಿ ನಷ್ಟ ಉಂಟಾಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಬೆಲೆ ಇಳಿಕೆಯಿಂದ ಸರ್ಕಾರಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಲಾಭದಲ್ಲಿ ಸ್ವಲ್ಪ ಕಡಿಮೆ ಆಗುತ್ತದೆ ಅಷ್ಟೆ. ಇಷ್ಟು ದಿನ ಜನರಿಂದ ಕೊಳ್ಳೆ ಹೊಡೆದ ಹಣವೆಷ್ಟು ಎಂದು ಮೊದಲು ಹೇಳಿ. ಇದುವರೆಗೆ ಹಾಕಿದ ಸೆಸ್ ಎಷ್ಟು ಎಂದು ಹೇಳಿ. ನೀವು ₹ 60ಕ್ಕೆ ಪೆಟ್ರೋಲ್ ಮಾರಿದರೂ ನಿಮಗೆ ನಷ್ಟ ಆಗುವುದಿಲ್ಲ ಎಂದರು.

ಕೋವಿಡ್ ಲಾಕ್‌ಡೌನ್‌ನಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು ಇದುವರೆಗೆ ಚೇತರಿಕೆ ಕಂಡಿಲ್ಲ. ಅನೇಕರು ಕೆಲಸ ಕಳೆದುಕೊಂಡು ಜೀವನ ನಿರ್ವಹಣೆಗೆ ಸಾಲ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಆಸರೆಯಾಗಬೇಕಿದ್ದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ನಿರತರವಾಗಿ ಅಗತ್ಯ ವಸ್ತುಗಳ, ಆಹಾರ ಪದಾರ್ಥಗಳ ಬೆಲೆ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಏರಿಕೆ ಮಾಡಿ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಬೆಲೆಏರಿಕೆ ತಡೆಗಟ್ಟಿ ಸಾರ್ವಜನಿಕರಿಗೆ ಪಡಿತರ ವ್ಯವಸ್ಥೆಯ ಮೂಲಕ ತೆರಿಗೆಯೇತರ ಎಲ್ಲಾ ಕುಟುಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಮತ್ತು ಅಗತ್ಯ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆಯನ್ನು ವಿತರಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಅವಶ್ಯಕ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬೆಲೆ ನಿಯಂತ್ರಣದ ಮೇಲಿದ್ದ ಸರ್ಕಾರ ಪಾತ್ರವನ್ನು ಕಿತ್ತು ಹಾಕಿ ಕಾರ್ಪೋರೇಟ್ ಪರ ನಿಂತಿದೆ. ಕೂಡಲೇ ಬೆಲೆ ಇಳಿಕೆ ಮಾಡಿ ಅಡುಗೆ ಅನಿಲ ಸಬ್ಸಿಡಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

Join Whatsapp
Exit mobile version