Home ರಾಜ್ಯ ತ್ರಿಪುರಾ ಹಿಂಸಾಚಾರ ವಿರುದ್ಧ ಧ್ವನಿಎತ್ತದ ಜಾತ್ಯತೀತ ಪಕ್ಷಗಳ ಮೌನ ಸಂಶಯಾಸ್ಪದ: SDPI ನಾಯಕ ಅಬ್ದುಲ್ ಮಜೀದ್

ತ್ರಿಪುರಾ ಹಿಂಸಾಚಾರ ವಿರುದ್ಧ ಧ್ವನಿಎತ್ತದ ಜಾತ್ಯತೀತ ಪಕ್ಷಗಳ ಮೌನ ಸಂಶಯಾಸ್ಪದ: SDPI ನಾಯಕ ಅಬ್ದುಲ್ ಮಜೀದ್

ಮೈಸೂರು: ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾತ್ಮಕ ದುಷ್ಕೃತ್ಯಗಳ ಬಗ್ಗೆ ಜಾತ್ಯತೀತ ಪಕ್ಷಗಳ ಮೌನ ಸರಿಯಲ್ಲ, ಈ ಬಗ್ಗೆ ರಾಷ್ಟ್ರದ ಪ್ರಮುಖ ವಿರೋಧ ಪಕ್ಷಗಳು ಅದರಲ್ಲೂ ತಮ್ಮನ್ನು ತಾವು ಜಾತ್ಯತೀತ ಎಂದು ಘೋಷಿಸಿಕೊಳ್ಳುವ ಪಕ್ಷಗಳ ದಿವ್ಯ ಮೌನ ಪ್ರಶ್ನಾರ್ಹವಾಗಿವೆ. ಅವುಗಳ ಜಾತ್ಯತೀತ ನಿಲುವನ್ನು ಸಂಶಯಕ್ಕೀಡು ಮಾಡಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.


ತ್ರಿಪುರಾದ ವಿವಿಧ ಭಾಗಗಳಲ್ಲಿ ಮುಸ್ಲಿಮರು, ಮಸೀದಿಗಳು ಮತ್ತು ಅವರ ಆಸ್ತಿ ಪಾಸ್ತಿಗಳ ಮೇಲೆ ನಡೆಯುತ್ತಿರುವ ಹಿಂದುತ್ವ ಸಂಘಟನೆಗಳ ದಾಳಿಗಳನ್ನು ಖಂಡಿಸಿ ಎಸ್.ಡಿ.ಪಿ.ಐ ಮೈಸೂರು ಜಿಲ್ಲಾ ಘಟಕ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.


ಆರ್ ಎಸ್ ಎಸ್, ವಿಎಚ್ ಪಿ ಮತ್ತು ಬಜರಂಗದಳದಂತಹ ಬಲಪಂಥೀಯ ಗುಂಪುಗಳು ಈಶಾನ್ಯ ಪ್ರದೇಶದ ಅಲ್ಪಸಂಖ್ಯಾತ ಮುಸ್ಲಿಮರನ್ನು ಬಾಂಗ್ಲಾದೇಶಿ ನುಸುಳುಕೋರರು ಎಂಬ ಸುಳ್ಳಾರೋಪ ಹೊರಿಸಿ ಹಿಂಸಿಸುವಲ್ಲಿ ಕುಖ್ಯಾತವಾಗಿವೆ. ನೆರೆಯ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸುವುದು ಸರಿಯಲ್ಲ. ಅದನ್ನು ಎಸ್ ಡಿಪಿಐ ಪಕ್ಷ ಈಗಾಗಲೇ ಕಠಿಣ ಶಬ್ಧಗಳಿಂದ ಖಂಡಿಸಿದೆ. ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ. ಫೈಝಿ ಅವರು ಬಾಂಗ್ಲಾದೇಶದ ಅಲ್ಪಸಂಖ್ಯಾತರ ಮೇಲಿನ ಹಲ್ಲೆಯನ್ನು ಖಂಡಿಸಿ ಖಂಡನಾ ಹೇಳಿಕೆಯನ್ನು ಸಹ ನೀಡಿದ್ದಾರೆ ಎಂದರು.


ಅಸ್ಸಾಮ್, ತ್ರಿಪುರಾ ರಾಜ್ಯಗಳಲ್ಲಿ ನಿರಂತರವಾಗಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ ನಡೆಯುತ್ತಿವೆ. ಇಂತಹ ಪರಿಸ್ಥಿತಿಯಲ್ಲೂ ವಿರೋಧ ಪಕ್ಷಗಳು ಮೌನವಹಿಸಿವೆ. ಈ ಪಕ್ಷಗಳ ನಿರ್ಲಪ್ತತೆಯನ್ನು ಸಹ ಪಕ್ಷ ಖಂಡಿಸುತ್ತದೆ. ಪ್ರಸ್ತುತ ತ್ರಿಪುರ ರಾಜ್ಯದಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸುವ ನಿಟ್ಟಿನಲ್ಲಿ ತ್ರಿಪುರಾದ ನಾಗರಿಕ ಸಮಾಜ ಮುಂದೆ ಬರಬೇಕು. ಹಿಂದುತ್ವ ಸಂಘಟನೆಗಳ ಗೂಂಡಾಗಳ ವಿರುದ್ಧ ತಕ್ಷಣ ಕ್ರಮಗಳನ್ನು ಖಾತ್ರಿಪಡಿಸುವ ಮೂಲಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಈ ಮೂಲಕ ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸಬೇಕು ಎಂದು ಅವರು ಆಗ್ರಹಿಸಿದರು.


ಹಿಂಸಾಚಾರದ ಹಿಂದಿರುವ ನೈಜ ಸೂತ್ರಧಾರರು ಮತ್ತು ಪ್ರಚೋದಕರನ್ನು ನ್ಯಾಯಾಲಯದ ಎದುರು ತಂದು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಈ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಎಸ್ ಡಿಪಿಐ ಜಿಲ್ಲಾಧ್ಯಕ್ಷ ರಫತ್ ಖಾನ್, ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಅಮ್ಜದ್ ಖಾನ್, ನೂರುದ್ದೀನ್ ಮೌಲಾನ, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರ ಗುರು, ಪಕ್ಷದ ಉಪಾಧ್ಯಕ್ಷ ಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version