ಬೆಂಗಳೂರು:ಅಧಿಕಾರ ದುರ್ಬಳಕೆ ಮಾಡಿಕೊಂಡ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದ ಮೇರೆಗೆ ಬಿಎಸ್ ಯಡಿಯೂರಪ್ಪ,ಹಾಗೂ ಬಿವೈ ವಿಜಯೇಂದ್ರ, ಕುಟುಂಬಸ್ಥರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವಸತಿ ಯೋಜನೆಗಳನ್ನು ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನ್ಸ್ಟ್ರಕ್ಷನ್ ಕಂಪನಿಯಿಂದ ಕೋಟ್ಯಾಂತರ ರೂಪಾಯಿ ನಗದು ಪಡೆದಿದ್ದಾರೆ. ಜೊತೆಗೆ ಶೆಲ್ ಕಂಪನಿಗಳ ಮೂಲಕ ಲಂಚ ಪಡೆದಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಟಿ.ಜೆ ಅಬ್ರಹಾಂ ಅವರು ಖಾಸಗಿ ದೂರು ದಾಖಲಿಸಿದ್ದರು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಜಯಂತ್ ಕುಮಾರ್ ಅವರು ಯಡಿಯೂರಪ್ಪ ಮತ್ತು ಆರೋಪ ಹೊತ್ತ ಇತರರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಿ ಹಾಗೂ ನವೆಂಬರ್ 2 ರ ಒಳಗೆ ವರದಿ ನೀಡುವಂತೆ ಲೋಕಾಯುಕ್ತ ಪೋಲಿಸರಿಗೆ ಆದೇಶ ನೀಡಿದ್ದಾರೆ.