Home ಟಾಪ್ ಸುದ್ದಿಗಳು ವರದಕ್ಷಿಣೆಗಾಗಿ ಕಿರುಕುಳ ಆರೋಪ: ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್​​ಪೆಕ್ಟರ್​ ವಿರುದ್ಧ FIR

ವರದಕ್ಷಿಣೆಗಾಗಿ ಕಿರುಕುಳ ಆರೋಪ: ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್​​ಪೆಕ್ಟರ್​ ವಿರುದ್ಧ FIR

0

ಬೆಂಗಳೂರು: ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಧರ್ಮಸ್ಥಳ ಪೊಲೀಸ್‌ ಠಾಣೆಯ ಸಬ್ ಇನ್​ಸ್ಪೆಕ್ಟರ್ ವಿರುದ್ಧ ಪತ್ನಿ ದೂರು ನೀಡಿದ್ದು, ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಶೋರ್‌ ಅವರ ಪತ್ನಿ, ನಾಗರಬಾವಿ ಟೀಚರ್ಸ್ ಕಾಲೊನಿಯ ಮಾನಸ ನಗರದ ನಿವಾಸಿ ಆರ್‌.ವರ್ಷಾ ಅವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕಿಶೋರ್ ಅವರ ತಂದೆ ಪುಟ್ಟಚನ್ನಪ್ಪ, ತಾಯಿ ಸರಸ್ವತಮ್ಮ, ಸಹೋದರ ಪಿ.ಚಂದನ್‌ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎಲ್ಲರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ನಿವಾಸಿಗಳು.

‘ವರದಕ್ಷಿಣೆ ತರುವಂತೆ ಪದೇ ಪದೇ ಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿ, ವರ್ಷಾ ಅವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ದೂರಿನಲ್ಲಿ ಇರುವುದೇನು?: 2024ರಲ್ಲಿ ಪಿಎಸ್ಐ ಕಿಶೋರ್​ನೊಂದಿಗೆ ವರ್ಷಾಳ ಮದುವೆಯಾಗಿತ್ತು. ವರದಕ್ಷಿಣೆ ರೂಪದಲ್ಲಿ 10 ಲಕ್ಷ ನಗದು, 23 ಲಕ್ಷ ಮೌಲ್ಯದ ಕ್ರೇಟಾ ಕಾರು, 135 ಗ್ರಾಂ ಚಿನ್ನವನ್ನ ಪೋಷಕರು ನೀಡಿದ್ದರು. ಅಲ್ಲದೇ, ವಿವಾಹ ವೇಳೆ 900 ಗ್ರಾಂ ಚಿನ್ನ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು.ವಿವಾಹ ಆರಂಭದಲ್ಲಿ ಪತಿಯು ತನ್ನೊಂದಿಗೆ ಅನೋನ್ಯವಾಗಿದ್ದ. ಮೂಡಿಗೆರೆಯಲ್ಲಿ ಪಿಎಸ್​ಐ ಆಗಿ ಕರ್ತವ್ಯ ವೇಳೆ ಕಿಶೋರ್ ಬೇರೆ ಠಾಣೆಗೆ ವರ್ಗಾವಣೆಗಾಗಿ 10 ಲಕ್ಷ ರೂ. ತಂದುಕೊಡುವಂತೆ ಒತ್ತಾಯಿಸಿದ್ದರು. ಹಣ ತರದಿದ್ದಕ್ಕೆ ತನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ್ದ. ಇದಕ್ಕೆ ಗಂಡನ ಪೋಷಕರು ಹಾಗೂ ಬಾಮೈದುನ ತನ್ನ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದರು ಎಂದು ದೂರಿನಲ್ಲಿ ವರ್ಷಾ ಆರೋಪಿಸಿದ್ದಾರೆ.

ಮಾನಸಿಕ ಕಿರುಕುಳ ನೀಡಿ ಗೃಹ ಬಂಧನದಲ್ಲಿರಿಸಿ ಚಿತ್ರಹಿಂಸೆ ನೀಡಿದ್ದಾರೆ. ಹಲ್ಲೆ ಮಾಡಿರುವುದನ್ನ ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಂಡನ ವಿರುದ್ಧ ವರದಕ್ಷಿಣೆ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ಮಹಿಳೆ ಆಪಾದಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version