ನವದೆಹಲಿ: ಅಮೆರಿಕದ ಅಲಬಾಮ ರಾಜ್ಯದ ಗ್ರೀನ್ ಕೌಂಟಿಯಲ್ಲಿ ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಭಾರತ ಮೂಲದ ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ.
ಎಲ್ಲಾ ನಾಲ್ವರೂ ಕೂಡ ಹೈದರಾಬಾದ್ ಮೂಲದವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರೆನ್ನಲಾಗಿದೆ. ಅಟ್ಲಾಂಟಾದಲ್ಲಿ ಸಂಬಂಧಿಕರನ್ನು ಭೇಟಿ ಮಾಡಿ ಡಾಲಸ್ನಲ್ಲಿರುವ ತಮ್ಮ ನಿವಾಸಕ್ಕೆ ಮರಳುತ್ತಿರುವಾಗ, ಮಾರ್ಗಮಧ್ಯೆ ಶನಿವಾರ ರಾತ್ರಿ ಈ ಅಪಘಾತ ಸಂಭವಿಸಿದೆ.
ಸಂತ್ರಸ್ತರು ಮೂಲತಃ ಹೈದರಾಬಾದ್ನ ತಿರುಮಲಗಿರಿ ಮೂಲದವರಾಗಿದ್ದಾರೆ. ಸಾವನ್ನಪ್ಪಿದವರನ್ನು ಬೆಜಿಗಂ ಶ್ರೀವೆಂಕಟ್ (40) ಮತ್ತು ಚೊಲ್ಲೆಟಿ ತೇಜಸ್ವಿನಿ (36) ಅವರ ಮಕ್ಕಳಾದ ಸಿದ್ಧಾರ್ಥ (9) ಮತ್ತು ಮೃದ (7) ಎಂಬುದು ತಿಳಿದು ಬಂದಿದೆ.
ರಜೆ ಹಿನ್ನೆಲೆಯಲ್ಲಿ ಶ್ರೀವೆಂಕಟ್ ಅಟ್ಲಾಂಟಾಗೆ ತೆರಳಿದ್ದರು. ಮೂರು ದಿನಗಳ ಕಾಲ ಅಲ್ಲಿ ಸಮಯ ಕಳೆದ ಅವರು, ಮರಳಿ ಬರುವಾಗ ಈ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್, ಶ್ರೀವೆಂಕಟ್ ಪೋಷಕರು ಮತ್ತು ಸಹೋದರಿ ಅಲ್ಲಿಯೇ ಉಳಿದಿದ್ದಾರೆ. ಭಾನುವಾರ ಬೆಳಗ್ಗೆ ಮರಳುವಾಗ ಈ ಅನಾಹುತ ನಡೆದಿದೆ.
ಗ್ರೀನ್ ಕೌಂಟಿಗೆ ಬರುತ್ತಿರುವಾಗ ಮಿನಿ ಟ್ರಕ್ವೊಂದು ತಪ್ಪು ಮಾರ್ಗದಲ್ಲಿ ಬಂದು ವೆಂಕಟ್ ಕಾರಿಗೆ ಗುದಿದ್ದು, ತಕ್ಷಣಕ್ಕೆ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದಲ್ಲಿ ನಾಲ್ವರು ಸುಟ್ಟು ಕರಕಲಾಗಿದ್ದು, ಅಪಘಾತ ಸ್ಥಳದಲ್ಲಿ ಶ್ರೀವೆಂಕಟ್ ಮಗ ಸಿದ್ಧಾರ್ಥ್ ಶಾಲೆ ಐಡಿ ದೊರಕಿದ ಹಿನ್ಲೆಲೆಯಲ್ಲಿ ತನಿಖೆ ಮಾಡಿದಾಗ ಶ್ರೀವೆಂಕಟ್ ವಿಳಾಸ ಪತ್ತೆಯಾಗಿದೆ. ಸಾವನ್ನಪ್ಪಿದ ನಾಲ್ವರ ಡಿಎನ್ಎ ಮಾದರಿಗಳನ್ನು ಫೋರೆನ್ಸಿಕ್ ಲ್ಯಾಬ್ಗೆ ಕಳುಹಿಸಲಾಗಿದೆ ಎಂದು ಅಲ್ಲಿನ ಸ್ಥಳೀಯ ಪೊಲೀಸರು ಹೇಳಿದ್ದಾರೆ.
