ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಮಾಡುತ್ತಿರುವ ಪ್ರತಿಭಟನೆ ಜೂ. 26ಕ್ಕೆ ಏಳು ತಿಂಗಳು ಪೂರ್ಣಗೊಳ್ಳುವುದರಿಂದ, ಆ ದಿನ ರಾಜ್ಯಪಾಲರ ನಿವಾಸಗಳ ಮುಂದೆ ಧರಣಿ ನಡೆಸಲು ಕರೆ ನೀಡಲಾಗಿದೆ.
ಸುಮಾರು 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಈ ಪ್ತತಿಭಟನೆಗೆ ಕರೆ ನೀಡಿದೆ. ಜೂ.26ರ ಪ್ರತಿಭಟನೆ ವೇಳೆ ರೈತರು ಕಪ್ಪು ಧ್ವಜ ಪ್ರದರ್ಶಿಸಲಿದ್ದಾರೆ. ಅಲ್ಲದೆ, ರಾಷ್ಟ್ರಪತಿ ರಾಮನಾಥ ಕೋವಿಂದ್ ಗೆ ಮನವಿಗಳನ್ನು ನೀಡಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ಈ ದಿನವನ್ನು “ಹೊಲ ರಕ್ಷಿಸಿ, ಪ್ರಜಾಪ್ರಭುತ್ವ ರಕ್ಷಿಸಿ” ಎಂಬ ಘೋಷಣೆಯೊಂದಿಗೆ ಆಚರಿಸಲಾಗುವುದು ಎಂದು ವಿಷಯದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಎಸ್ ಕೆಎಂನ ರೈತ ಮುಖಂಡ ಇಂದ್ರಜೀತ್ ಸಿಂಗ್ ಹೇಳಿದ್ದಾರೆ.
“ನಾವು ಅಂದು ಎಲ್ಲಾ ರಾಜಭವನಗಳ ಮುಂದೆ ಕಪ್ಪು ಧ್ವಜ ಪ್ರದರ್ಶಿಸಲಿದ್ದೇವೆ ಮತ್ತು ರಾಷ್ಟ್ರಪತಿಗಳ ಪ್ರತಿನಿಧಿಗಳಾದ ಎಲ್ಲಾ ರಾಜ್ಯಗಳ ರಾಜ್ಯಪಾಲರುಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಿದ್ದೇವೆ” ಎಂದು ಸಿಂಗ್ ತಿಳಿಸಿದ್ದಾರೆ.