ಮಂಗಳೂರು : ತೈಲಬೆಲೆ, ಗ್ಯಾಸ್ ದರವನ್ನು ಏರಿಕೆ ಮಾಡುವ ಮೂಲಕ ಸರ್ಕಾರ ಜನರಿಂದ ಲೂಟಿ ಮಾಡ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಕಿಡಿಕಾರಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ ಹೊರೆಯಾಗಿದೆ. ಕೇಂದ್ರ ಸರ್ಕಾರ ದರ ನಿಯಂತ್ರಣ ಮಾಡಲು ತೈಲ, ಅಡುಗೆ ಅನಿಲ ದರವನ್ನು ನಿಯಂತ್ರಣ ಮಾಡಬೇಕಿತ್ತು. ಆದರೆ ಅದನ್ನು ಮಾಡದ ಕಾರಣ ಜನರು ಈಗ ಸಂಕಷ್ಟ ಅನುಭವಿಸುವಂತಾಗಿದೆ ಎಂದರು.
ಯಾವಾಗ ದೇಶದಲ್ಲಿ ಕೊರೊನಾ ಪ್ರವೇಶವಾಯಿತೋ, ಆವಾಗಿಂದ ಸಂಕಷ್ಟ ಆರಂಭವಾಯಿತು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದರ ಏರಿಕೆ ಮಾಡೋ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತ್ತು. ಇದಕ್ಕೆ ಬಿಜೆಪಿ ಸರ್ಕಾರ ಕೂಡಲೇ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಅವರು, ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಅದಾನಿಯಂತಹವರ ಆಸ್ತಿ ಮೂರು ಲಕ್ಷ ಕೋಟಿ ಜಾಸ್ತಿಯಾಗಿದೆ. ಈ ಮೂಲಕ ನಮಗೆ ದೇಶದ ಆಸ್ತಿ ಎಲ್ಲಿಗೆ ಹೋಗುತ್ತಿದೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಇಂತಹ ಪರಿಸ್ಥಿತಿ ಭಾರತ ದೇಶಕ್ಕೆ ಬಂದಿರುವುದು ದುರಾದೃಷ್ಟಕರ, ಖಂಡನೀಯ. ಕೂಡಲೇ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಇಳಿಸಬೇಕು ಎನ್ನುವುದು ನಮ್ಮ ಹೋರಾ,. ತೈಲ, ಗ್ಯಾಸ್ ಜೊತೆಗೆ ದಿನನಿತ್ಯ ಬಳಕೆಯ ವಸ್ತುಗಳ ದರ ಏರಿಕೆಯಾಗುತ್ತಿದ್ದು ಇದನ್ನು ಖಂಡಿಸಿ ನಾವು ಸಂಘಟಿತರಾಗಿ ಹೋರಾಟ ಮಾಡಲಿದ್ದೇವೆ . ದರ ಏರಿಕೆಯನ್ನು ಖಂಡಿಸಿ ಜೂನ್ 14 ರ ಸೋಮವಾರ ಮಂಗಳೂರು ನಗರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಜಾಥಾ ನಡೆಯಲಿದೆ ಎಂದು ತಿಳಿಸಿದರು.