ಬೆಂಗಳೂರು : ದೇಶಕ್ಕೆ ಅನ್ನ ಕೊಡುವ ರೈತರು ಇಂದು ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದಾರೆ. ದೆಹಲಿಯ ಕೊರೆವ ಚಳಿಯಲ್ಲೂ ಕಳೆದ 37 ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ಅನ್ನದಾತರು ಪ್ರತಿಭಟನೆ ನಿರತರಾಗಿದ್ದಾರೆ. ರೈತರು ಕಷ್ಟದಲ್ಲಿರುವಾಗ ಅವರ ಕಷ್ಟದಲ್ಲಿ ಭಾಗಿಯಾಗುವುದು ಮತ್ತು ಬೆಂಬಲಕ್ಕೆ ನಿಲ್ಲುವುದು ನಮ್ಮ ಕರ್ತವ್ಯ ಎಂದು ಘೋಷಿಸಿರುವ ರಾಜ್ಯದ ಯುವಜನರ ತಂಡಗಳು ಜನಜಾಗೃತಿ ಆಂದೋಲನ ನಡೆಸಲು ಮುಂದಾಗಿವೆ.
ದೇಶಪ್ರೇಮಿ ಯುವಾಂದೋಲನ ಹೆಸರಿನಲ್ಲಿ ಸೈಕಲ್ ಜಾಥಾದ ಮೂಲಕ ಒಂದು ವಾರಗಳ ಕಾಲ ಹಲವು ಹಳ್ಳಿಗಳನ್ನು ತಲುಪಲು ವಿದ್ಯಾರ್ಥಿ – ಯುವಜನರು ನಿರ್ಧರಿಸಿದ್ದಾರೆ. ರಾಮನಗರ ಮತ್ತು ಗಂಗಾವತಿಯಲ್ಲಿ ಇಂದು ಸೈಕಲ್ ಜಾಥಾ ಉದ್ಘಾಟನೆಯಾಗಿದ್ದು, ಯುವಕರ ಗುಂಪುಗಳು ಪ್ರಚಾರಾಂದೋಲನ ಆರಂಭಿಸಿದ್ದಾರೆ.
ದೇಶಕ್ಕೆ ಈ ತನಕ ಅನ್ನಕೊಟ್ಟ ಅನ್ನದಾತರು ಪ್ರತಿಭಟನೆಗಿಳಿದು ದೆಹಲಿಯ ಬೀದಿಗಳಲ್ಲಿ ಪ್ರಾಣ ಕೊಡುತ್ತಿದ್ದಾರೆ. ಅವರು ಬೆವರು ಸುರಿಸಿ ಕೊಟ್ಟ ಅನ್ನ ತಿಂದು ಬೆಳೆದ ನಮ್ಮೆಲ್ಲರ ಮೇಲೂ ಅನ್ನದ ಋಣ ಇದೆ. ಇದರ ನಡುವೆಯೂ ಹೊಸ ವರ್ಷ ಬರುತ್ತಿದೆ. ಹೊಸ ವರ್ಷಕ್ಕೆ ನಾವು ಸಾಧಿಸಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳುವುದನ್ನು ಬಿಟ್ಟು, 2021ರಲ್ಲಿ ರೈತರ ಪರವಾಗಿ ಕಾರ್ಯ ನಿರ್ವಹಿಸುವ ನಿರ್ಣಯ ಕೈಗೊಳ್ಳೋಣ ಬನ್ನಿ ಎಂದು ಯುವಜನರು ಕರೆ ನೀಡಿದ್ದಾರೆ.
ರಾಮನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಲ್ಲಯ್ಯನವರು ಅಭಿಯಾನಕ್ಕೆ ಕರೆ ನೀಡಿದರರು. ರೈತ ಮುಖಂಡರು, ದೇಶಪ್ರೇಮಿ ಯುವಾಂದೋಲನದ ಸರೋವರ್ ಬೆಂಕೆ, ಮನೋಜ್, ಪುಷ್ಪಲತಾ, ರವಿ, ರಾಜಶೇಖರ್ ಅಂಗಡಿ, ಬಸವರಾಜ್, ಮಮತಾ ಮುಂತಾದವರಿದ್ದರು
ಇನ್ನೊಂದೆಡೆ ಕೊಪ್ಪಳದಲ್ಲಿ ನಡೆದ ಸೈಕರ್ ಜಾಥಾದಲ್ಲಿ ಬಿ. ಪೀರ್ ಭಾಷಾ, ಹೋರಾಟಗಾರರಾದ ಡಿಎಚ್ ಪೂಜಾರ್ ಚಾಲನೆ ನೀಡಿದರು. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂತೋಷ್ ಎಚ್.ಎಂ., ರಾಜೇಂದ್ರ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣ ಬಸವ ಮತ್ತಿತರರು ಜಾಧಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.