Home ಟಾಪ್ ಸುದ್ದಿಗಳು ಪ್ರತಿಯೊಬ್ಬ ಯುವ ಮತದಾರ ಬದಲಾವಣೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಮತ ಚಲಾಯಿಸಬೇಕು ; ಡಿ.ಕೆ. ಶಿವಕುಮಾರ್

ಪ್ರತಿಯೊಬ್ಬ ಯುವ ಮತದಾರ ಬದಲಾವಣೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ಮತ ಚಲಾಯಿಸಬೇಕು ; ಡಿ.ಕೆ. ಶಿವಕುಮಾರ್

ಬೆಂಗಳೂರು; ಪ್ರತಿಯೊಂದು ಯುವಮತ ರಾಷ್ಟ್ರ ನಿರ್ಮಾಣ ಮತ್ತು ಬದಲಾವಣೆ ಉದ್ದೇಶ ಹೊಂದಿರಬೇಕು. ಉಜ್ವಲ ಕರ್ನಾಟಕ ನಿರ್ಮಾಣ ಮಾಡಲು ಪ್ರತಿಯೊಬ್ಬರು ತಮ್ಮ ಹಕ್ಕು ಚಲಾಯಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.


ನಗರದ ಈಡನ್ ಪಾರ್ಕ್ ಹೋಟೆಲ್ ನಲ್ಲಿ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವ ಮತದಾರರೊಂದಿಗೆ “ಯುವ ಮತ” ಸಂವಾದ ನಡೆಸಿ ಮಾತನಾಡಿದ ಅವರು, ನಿಮ್ಮ ಜೀವನದ ಬದಲಾವಣೆಗಾಗಿ, ನಿಮ್ಮ ಪ್ರಗತಿಗಾಗಿ ಅದರಲ್ಲೂ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ವಿವೇಚನೆಯಿಂದ ಮತದಾನ ಮಾಡಬೇಕು. ಇಡೀ ದೇಶ ಕರ್ನಾಟಕದತ್ತ ನೋಡುತ್ತಿದ್ದು, ಈ ರಾಜ್ಯದ ಘನತೆ, ಗೌರವ, ವರ್ಚಸ್ಸು ಎತ್ತಿ ಹಿಡಿಯುವ, ಗ್ರ್ಯಾಂಡ್ ಕರ್ನಾಟಕ, ಗ್ಲೋಬಲ್ ಕರ್ನಾಟಕ, ಉತ್ತಮ ಕರ್ನಾಟಕ ನಿರ್ಮಾಣ ಮಾಡುವ ಪಕ್ಷಕ್ಕೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ಡಬಲ್ ಎಂಜಿನ್ ಸರ್ಕಾರ ದೇಶದ ಅತಿ ದೊಡ್ಡ ಭ್ರಷ್ಟ ಸರ್ಕಾರ. ಇದು ಆಡಳಿತಕ್ಕೆ ಬಂದ ನಂತರ ನಿಮ್ಮ ಜೀವನದಲ್ಲಿ ಏನಾದರೂ ಸಣ್ಣ ಬದಲಾವಣೆಯಾಗಿದೆಯೇ? ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಪ್ರತಿದಿನ ಯುವ ಸಮೂಹ ಪೆಟ್ರೋಲ್ ಡೀಸೆಲ್ ದರ ಏರಿಕೆಯಿಂದಾಗಿ ಪಿಕ್ ಪಾಕೆಟ್ ಗೆ ಒಳಗಾಗುತ್ತಿದೆ. ನಿಮ್ಮ ತಾಯಂದಿರನ್ನು ಕೇಳಿದರೆ ಬೆಲೆ ಏರಿಕೆ ಬಿಸಿ ಅರಿವಾಗುತ್ತದೆ. ಅಡುಗೆ ಅನಿಲ ಒಂದೇ ಅಲ್ಲದೇ ಪ್ರತಿಯೊಂದು ವಸ್ತುಗಳು ಗಗನ ಮುಖಿಯಾಗಿವೆ. ಜನ ಸಾಮಾನ್ಯರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಿಂಚಿತ್ತೂ ಕಳಕಳಿ ಇಲ್ಲ. ಆದ್ದರಿಂದ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಲು ಮತದಾನ ಮಾಡುವಂತೆ ಸಲಹೆ ಮಾಡಿದರು.


ಬಿಜೆಪಿ ಜನರನ್ನು ದಾರಿ ತಪ್ಪಿಸುವ ಕೆಲಸದಲ್ಲಿ ತೊಡಗಿದ್ದು, ಈ ಬಗ್ಗೆ ಎಚ್ಚರಿಕೆ ಅಗತ್ಯ. ದಕ್ಷಿಣ ಕರ್ನಾಟಕದಲ್ಲಿ ಕೇರಳ, ತಮಿಳುನಾಡು, ತೆಲಂಗಾಣ ರಾಜ್ಯಗಳ ಜನ ಸಾಕ್ಷರತೆಯಲ್ಲಿ ಮಾದರಿ. ಪಶ್ಚಿಮ ಬಂಗಾಳ ಕೂಡ ಬುದ್ದಿವಂತರಿರುವ ತಾಣ. ಈ ರಾಜ್ಯಗಳಲ್ಲಿ ಯಾಕೆ ಬಿಜೆಪಿ ಆಟ ನಡೆಯುವುದಿಲ್ಲ ಎನ್ನುವುದನ್ನು ಪ್ರತಿಯೊಬ್ಬ ಯುವ ಮತದಾರ ಆಲೋಚಿಸಬೇಕು. ಇವರು ಅಭಿವೃದ್ಧಿ ಮಾಡಿದ್ದರೆ ಯಾಕೆ ಪ್ರಧಾನಿ ವಾರಕ್ಕೊಮ್ಮೆ ಕರ್ನಾಟಕಕ್ಕೆ ಬರುತ್ತಾರೆ. ಗೃಹ ಸಚಿವರು, ಕೇಂದ್ರ ಸಚಿವರು ಎಡೆಬಿಡದೇ ಪ್ರಚಾರದಲ್ಲಿ ತೊಡಗುತ್ತಾರೆ. ಬಿಜೆಪಿಯವರದ್ದು ಬರೀ ಪ್ರಚಾರ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಲು ಬಿಜೆಪಿ ಸರ್ಕಾರ 60 ಕೋಟಿ ರೂ ವೆಚ್ಚ ಮಾಡಿದೆ. ಇದನ್ನು ವಿಮಾನ ನಿಲ್ದಾಣದವರೇ ಮಾಡುತ್ತಿದ್ದರು. ಇದರ ಜೊತೆಗೆ ಪ್ರಧಾನಿ ಕಾರ್ಯಕ್ರಮಕ್ಕೆ ಜನರನ್ನು ಕರೆ ತರಲು 30 ಕೋಟಿ ಖರ್ಚು ಮಾಡುತ್ತಾರೆ. ಜನ ಸಾಮಾನ್ಯರ ಹಣವನ್ನು ಜವಾಬ್ದಾರಿಯುತ ಸರ್ಕಾರ ವೆಚ್ಚ ಮಾಡುವ ರೀತಿಯೇ ಇದು ಎಂದು ಡಿ.ಕೆ. ಶಿವಕುಮಾರ್ ಖಾರವಾಗಿ ಪ್ರಶ್ನಿಸಿದರು.
ಸರ್ಕಾರವನ್ನು ಅಧಿಕಾರಕ್ಕೆ ತರುವ, ಬದಲಾವಣೆ ಮಾಡುವಲ್ಲಿ ಜನರ ಕೈಯಲ್ಲೇ ಇದೀಗ ರಿಮೋಟ್ ಕಂಟ್ರೋಲ್ ಇದೆ. ಯಡಿಯೂರಪ್ಪ. ಕುಮಾರ ಸ್ವಾಮಿ ಮುಖ ನೋಡಲು ಇಷ್ಟವಿಲ್ಲದಿದ್ದರೆ ವಾಹಿನಿಗಳನ್ನು ಬದಲಾವಣೆ ಮಾಡುತ್ತೀರಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ ಬೇಡ ಎಂದರೆ ಟಿವಿಯನ್ನೇ ಆಫ್ ಮಾಡುತ್ತೀರಿ. ಜನರ ಕೈಗೆ ಇಂತಹ ಕ್ರಾಂತಿಯನ್ನು ತಂದಿದ್ದು ರಾಜೀವ್ ಗಾಂಧಿ. ಅವರಿಂದಾಗಿಯೇ ಅಗಾಧ ಬದಲಾವಣೆಯಾಗಿದೆ. ಅಂತಹ ಸಾಧನ ನಿಮ್ಮ ಬಳಿ ಇದೆ. ಹಿಂದೆ ಶಾಸಕರು ಎಂದರೆ ದೇವರು ಎನ್ನುತ್ತಿದ್ದರು. ಈಗ ಜೈಲು, ಬೇಲು ಎಂದು ವ್ಯಂಗ್ಯವಾಡುವ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ ಎಂದು ವಿಷಾದಿಸಿದರು.


ಯುವ ಜನಾಂಗದ ಬಳಿ ಸಾಮಾಜಿಕ ಮಾಧ್ಯಮವಿದ್ದು, ಇದು ಅತಿ ದೊಡ್ಡ ಅಸ್ತ್ರವಾಗಿದೆ. ನಿಮ್ಮ ವಿಚಾರಗಳನ್ನು ಸಮರ್ಥವಾಗಿ ತಲುಪಿಸುವ ಕೆಲಸ ಮಾಡಬೇಕು. ನಿಮ್ಮ ಆಚಾರ, ವಿಚಾರಗಳನ್ನು ಸರಿಯಾಗಿ ಪ್ರಚಾರ ಮಾಡಿ ಕಾಂಗ್ರೆಸ್ ಗೆ, ಅದರಲ್ಲೂ ಬದಲಾವಣೆಗಾಗಿ ಶಕ್ತಿ ಕೊಡಿ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಆಡಳಿತ ಮತ್ತು ಸಮರ್ಥ ಸರ್ಕಾರವನ್ನು ನಾವು ನೀಡುತ್ತೇವೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ಪ್ರತಿಪಕ್ಷಗಳ ವಿರೋಧವನ್ನು ಲೆಕ್ಕಿಸದೇ ಮತದಾನದ ವಯೋಮಿತಿಯನ್ನು 21 ವರ್ಷಗಳಿಂದ 18 ವರ್ಷಕ್ಕೆ ಇಳಿಸಿದ್ದರು. ಹೀಗಾಗಿ ಕಾಂಗ್ರೆಸ್ ಯಾವಾಗಲೂ ಯುವ ಜನಾಂಗದ ಪರವಾಗಿದೆ ಎಂದು ಸಮರ್ಥಿಸಿಕೊಂಡರು.


ಏಐಸಿಸಿ ಕಾರ್ಯದರ್ಶಿ ಅಭಿಶೇಖ್ ದತ್ತ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯುವ ಸಮೂಹದ ಪರವಾಗಿದ್ದು, ಇದು ಯುವ ಮತದಾರರನ್ನು ಕೇಂದ್ರೀಕರಿಸಿದೆ. ಮುಂದಿನ 14 ದಿನ ಅತ್ಯಂತ ನಿರ್ಣಾಯಕವಾಗಿದ್ದು, ಯುವ ಜನಾಂಗ ಹೆಚ್ಚು ಮಾತನಾಡಬೇಕು. ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಯುವ ಮತ ಅಭಿಯಾನದ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಯುವ ಮತ ಅಭಿಯಾನವನ್ನು ಭೌತಿಕವಾಗಿ ಅಷ್ಟೇ ಅಲ್ಲದೇ ಬೀದಿ ನಾಟಕಗಳ ಮೂಲಕವೂ ಪ್ರಚಾರ ಮಾಡುತ್ತಿದ್ದು, ವಿವಿಧ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲು ವ್ಯಾಪಕ ಪ್ರಚಾರಾಂದೋಲನದಲ್ಲಿ ಯುವಮತ ಅಭಿಯಾನ ತಂಡ ತೊಡಗಿಕೊಂಡಿದೆ ಎಂದರು.


ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಯುವ ಜನಾಂಗಕ್ಕೆ ಅನುಕೂಲಕರವಾಗಿದ್ದು, ಪದವಿ ಮತ್ತು ಡಿಪ್ಲಮೋ ನಂತರ ಮಾಸಿಕ ನೆರವು ದೊರೆಯಲಿದೆ ಎಂದು ಹೇಳಿದರು.
ಸಂವಾದದಲ್ಲಿ ಯುವ ಕಾಂಗ್ರೆಸ್ ನಾಯಕಿ ಐಶ್ವರ್ಯ ಮತ್ತಿತರರು ಪಾಲ್ಗೊಂಡರು.

Join Whatsapp
Exit mobile version