ಮತಾಂತರಕ್ಕೆ ವಿದೇಶದಿಂದ ಹಣಕಾಸು ನೆರವು ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ದೆಹಲಿ ಮತ್ತು ಉತ್ತರಪ್ರದೇಶದ ಆರು ಸ್ಥಳಗಳಲ್ಲಿ ಶನಿವಾರ ಶೋಧ ಕಾರ್ಯ ನಡೆಸಿದೆ.
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ -ಎಟಿಎಸ್ ಕಳೆದ ತಿಂಗಳು ಮತಾಂತರಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ ಎನ್ನಲಾದ ಜಾಲವನ್ನು ಭೇದಿಸಿತ್ತು. ಈ ಸಂಬಂಧ ದೆಹಲಿಯ ಜಾಮಿಯಾ ನಗರದ ಇಬ್ಬರು ನಿವಾಸಿಗಳಾದ ಮುಫ್ತಿ ಖಾಜಿ ಜಹಾಂಗೀರ್ ಅಲಂ ಕಸ್ಮಿ ಮತ್ತು ಮುಹಮ್ಮದ್ ಉಮರ್ ಗೌತಮ್ ಎಂಬುವವರನ್ನು ಬಂಧಿಸಿತ್ತು.
ಬಂಧಿತರು, ಇಸ್ಲಾಮಿಕ್ ದಾವಾ ಸೆಂಟರ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಪಾಕಿಸ್ತಾನದ ಐಎಸ್‌ಐ ಹಾಗೂ ವಿದೇಶಗಳ ಕೆಲವು ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯುತ್ತಿದ್ದರು ಎಂದು ಎಟಿಎಸ್ ಆರೋಪಿಸಿತ್ತು. ಇದೀಗ ಇ.ಡಿ. ಈ ಸಂಬಂಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಶೋಧ ಕಾರ್ಯ ನಡೆಸಿದೆ.