Home Uncategorized ನೂತನ ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಅವಮಾನಿಸುವಂತೆ ಟ್ವೀಟ್ ಮಾಡಿದ ಡಿ ಎಂ ಕೆ ಮುಖಂಡ ಅಮಾನತು

ನೂತನ ಎಐಸಿಸಿ ಅಧ್ಯಕ್ಷ ಖರ್ಗೆಯನ್ನು ಅವಮಾನಿಸುವಂತೆ ಟ್ವೀಟ್ ಮಾಡಿದ ಡಿ ಎಂ ಕೆ ಮುಖಂಡ ಅಮಾನತು

ಚೆನ್ನೈ: ಇತ್ತೀಚೆಗೆ ನೂತನವಾಗಿ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೀಯಾಳಿಸಿ ಟ್ವೀಟ್ ಮಾಡಿದ್ದಕ್ಕೆ ಡಿ ಎಂ ಕೆ ಮುಖಂಡರೋರ್ವರನ್ನು ಪಕ್ಷವು ಅಮಾನತುಗೊಳಿಸಿದೆ.

ತಮಿಳುನಾಡಿನ ದ್ರಾವಿಡ ಮುನ್ನೇತ್ರಂ ಕಾಳಗಂ (ಡಿಎಂಕೆ) ಪಕ್ಷದ ಮುಖಂಡ ಕೆ ಎಸ್ ರಾಧಾಕೃಷ್ಣನ್ ಎಂಬುವವರನ್ನು ಅಮಾನತುಗೊಳಿಸಲಾಗಿದ್ದು, ಎಲ್ಲಾ ಹುದ್ದೆಗಳಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಡಿ ಎಂ ಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ತಿಳಿಸಿದ್ದಾರೆ.

ರಾಧಾಕೃಷ್ಣನ್ . ಮನಮೋಹನ್ ಸಿಂಗ್ 2.0 ಆಗಿ ಆಯ್ಕೆಯಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು ಎನ್ನುವ ಶೀರ್ಷಿಕೆಯಡಿಯಲ್ಲಿ ಖರ್ಗೆ ಅವರ ಮಾರ್ಪಡಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ.

ಮಹಾತ್ಮ ಗಾಂಧಿ ಕುಟುಂಬಕ್ಕೆ ಮನಮೋಹನ್ ಸಿಂಗ್  ಕೈಗೊಂಬೆಯಾಗಿದ್ದರು. ಖರ್ಗೆ ಕೂಡಾ ಮಾಜಿ ಪ್ರಧಾನಿಯನ್ನೇ ಅನುಸರಿಸಲಿದ್ದಾರೆ  ಎಂದು ಅವರು ಟ್ವೀಟ್ ಮಾಡಿದ್ದರು. ಡಿಎಂಕೆ ಮುಖಂಡ ಎಮ್ ಕೆ ಸ್ಟಾಲಿನ್ , ಸಂಸದೆ ಕನಿಮೊಳಿ ಮತ್ತಿತರ ಕೆಲವು ಡಿಎಂಕೆ ನಾಯಕರು ಖರ್ಗೆಯನ್ನು ಅಭಿನಂದಿಸಿರುವಾಗ ರಾಧಾಕೃಷ್ಣನ್ ನಡೆಯ ಬಗ್ಗೆ ವ್ಯಾಪಕ ವಿರೋಧದ ಬಳಿಕ ಆ ಟ್ವೀಟನ್ನು ಅಳಿಸಿದ್ದಾರೆ.

ರಾಧಾಕೃಷ್ಣನ್ ನಡೆ ನಮ್ಮ ಪಕ್ಷದ ವರ್ಚಸ್ಸನ್ನು ಕುಗ್ಗಿಸುತ್ತಿದೆ ಎಂದು ಡಿ ಎಂ ಕೆ ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ ಹೇಳಿದ್ದಾರೆ.

Join Whatsapp
Exit mobile version