ಮಂಗಳೂರು: ಬೆಳ್ತಂಗಡಿಯ ಕನ್ಯಾಡಿ ಎಂಬಲ್ಲಿ ಸಂಘ ಪರಿವಾರದ ನಾಯಕ ಕೃಷ್ಣ ಎಂಬಾತನಿಂದ ಹಲ್ಲೆಗೊಳಗಾಗಿ ಮೃತಪಟ್ಟ ದಲಿತ ಯುವಕ ದಿನೇಶ್ ಕನ್ಯಾಡಿ ಕುಟುಂಬಕ್ಕೆ ರೂ 8,25,000 ಪರಿಹಾರ ಧನ ಮತ್ತು ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ, ದಿನೇಶ್ ಅವರ ಮೂವರು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಕುಟುಂಬಕ್ಕೆ ಕೃಷಿ ಭೂಮಿ ನೀಡುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಮುಖೇನ ಮಾಹಿತಿ ನೀಡಿರುವ ಅವರು, ಅದರಲ್ಲಿ ಈ ಕುರಿತ ವಿವರಗಳನ್ನು ಉಲ್ಲೇಖಿಸಿದ್ದು ಪತ್ರದ ಪ್ರತಿಯನ್ನು ದಿನೇಶ್ ಕನ್ಯಾಡಿ ಪ್ರಕರಣದಲ್ಲಿ ಈ ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಹಮ್ಮಿಕೊಂಡ SDPI ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಿಗೂ ಕಳುಹಿಸಿದ್ದಾರೆ.
ಜಿಲ್ಲಾಡಳಿತದ ನಿರ್ಧಾರಕ್ಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಯವರು ಹರ್ಷ ವ್ಯಕ್ತಪಡಿಸಿದ್ದು, ಶೀಘ್ರವೇ ಅಧಿಕೃತ ಆದೇಶ ಹೊರಡಿಸಿ ಸಂತ್ರಸ್ತ ಕುಟುಂಬಕ್ಕೆ ನೆರವಾಗಬೇಕು ಎಂದು ಆಗ್ರಹಿಸಿದ್ದಾರೆ.
ದಿನೇಶ್ ಕನ್ಯಾಡಿಗೆ ಪರಿಹಾರದ ಜೊತೆಗೆ ಅವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ಕೃಷಿ ಭೂಮಿ, ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು ಮತ್ತು ಕೊಲೆ ಆರೋಪಿಯ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ SDPI ಮಾರ್ಚ್ 29 ರಂದು ಬೆಳ್ತಂಗಡಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಜಾಥಾ ನಡೆಸಿ ಒತ್ತಾಯಿಸಿತ್ತು.