ಹನೂರು: ವಿಶ್ವ ತಾಯಂದಿರ ದಿನಂದಂದೇ ಗರ್ಭಿಣಿ ಮಹಿಳೆಯೊಬ್ಬರು ಆಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮೈಸೂರು ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.
ಹನೂರು ತಾಲ್ಲೂಕಿನ ನಕ್ಕುಂದಿ ಗ್ರಾಮದ ಚಲುವರಾಜು ಎಂಬುವರ ಪತ್ನಿ ಪಲ್ಲವಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ.
ಪಲ್ಲವಿ ಅವರಿಗೆ ಶನಿವಾರ ರಾತ್ರಿ 12.30ರ ವೇಳೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕುಟುಂಬಸ್ಥರು ಆಕೆಯನ್ನು ಕೂಡ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದಾರೆ. ಆದರೆ ಪಲ್ಲವಿ ಅವರಿಗೆ ರಕ್ತ ಕಡಿಮೆ ಇದ್ದ ಹಿನ್ನೆಲೆ ಕೊಳ್ಳೇಗಾಲ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಕರೆದೊಯ್ಯುವಂತೆ ಕುಟುಂಬಸ್ಥರಿಗೆ ತಿಳಿಸಲಾಗಿತ್ತು. ಈ ವೇಳೆ 108 ಆಂಬ್ಯುಲೆನ್ಸ್ವಾಹನದ ಮೂಲಕ ಕೊಳ್ಳೇಗಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡು ಗಂಡು ಮಗುವಿಗೆ ಆಂಬುಲೆನ್ಸ್ ನಲ್ಲೇ ಜನ್ಮ ನೀಡಿದರು.
ಈ ಸಂದರ್ಭದಲ್ಲಿ108 ವಾಹನದ ತುರ್ತು ವೈದ್ಯಕೀಯ ಸಿಬ್ಬಂದಿ ನಾಗರಾಜು ಹಾಗೂ ಚಾಲಕ ಮಲ್ಲೇಶ್ ಅವರ ಸಹಕಾರ ಪಡೆದು ತಾಯಿ ಮಗುವನ್ನು ಆರೈಕೆ ಮಾಡಿದ್ದಾರೆ. ಬಳಿಕ ಕೂಡ್ಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಯಿತು. ಸದ್ಯ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.